ನವದೆಹಲಿ: ಈ ಬಾರಿ, ಮತ ಕಳ್ಳರ ಸೋಲು ಜನರ ಮತ್ತು ಸಂವಿಧಾನದ ಗೆಲುವು ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಆಗಸ್ಟ್ 17ರಿಂದ ಆರಂಭಗೊಳ್ಳುವ ‘ಮತದಾರ ಅಧಿಕಾರ ಯಾತ್ರೆ’ಯ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಇದು ಕೇವಲ ಚುನಾವಣೆಯ ವಿಷಯವಲ್ಲ.
ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ‘ಒಬ್ಬ ವ್ಯಕ್ತಿ, ಒಂದು ಮತ’ ತತ್ವವನ್ನು ರಕ್ಷಿಸಲು ನಡೆಯುತ್ತಿರುವ ನಿರ್ಣಾಯಕ ಹೋರಾಟ. ದೇಶಾದ್ಯಂತ ಮತದಾರರ ಪಟ್ಟಿಯಲ್ಲಿನ ಶುದ್ಧೀಕರಣವೇ ಈ ಅಭಿಯಾನದ ಪ್ರಮುಖ ಗುರಿ. ಯುವಕರು, ಕಾರ್ಮಿಕರು,
ರೈತರು ಸೇರಿದಂತೆ ದೇಶದ ಪ್ರತಿಯೊಬ್ಬ ನಾಗರೀಕನು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಬಿಹಾರದ ಮಣ್ಣಿನಿಂದ ಪ್ರಾರಂಭವಾಗುವ ಈ ಯಾತ್ರೆ ಸೆಪ್ಟೆಂಬರ್ 1ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಯುವ ಮಹಾ ರ‍್ಯಾಲಿಯೊಂದಿಗೆ ಮುಕ್ತಾಯಗೊಳ್ಳಲಿದೆ. ‘ಈ ಬಾರಿ, ಮತ ಕಳ್ಳರ ಸೋಲು ಜನರ ಮತ್ತು ಸಂವಿಧಾನದ ಗೆಲುವು’ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.