ಸಂವಿಧಾನ ವಿರೋಧಿಗಳು, ಮತಗಳ್ಳತನದ ವಿರುದ್ಧ ಹೋರಾಡಬೇಕಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

0
Spread the love

ಬೆಂಗಳೂರು: ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ, ಚುನಾವಣೆ ವ್ಯವಸ್ಥೆ ರಕ್ಷಿಸಿ, ತೆರಿಗೆ ಅಸಮಾನ ಹಂಚಿಕೆ ವಿರುದ್ಧ ಹೋರಾಡಿ, ಸರ್ವಾಧಿಕಾರ ತೊಲಗಿಸುವ ಪ್ರತಿಜ್ಞೆ ಮಾಡಿ” ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದರು.79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಧ್ವಜಾರೋಹಣ ನಡೆಸಿ ಮಾತನಾಡಿದರು.

Advertisement

ಎಲ್ಲರಿಗೂ 79ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು. ಸ್ವಾತಂತ್ರ್ಯ ಎಂದರೆ ಬೆಲೆ ಕಟ್ಟಿ ಪಡೆಯುವ ವಸ್ತುವಲ್ಲ. ಅದು ಜೀವನದ ಉಸಿರು ಎಂದು ಮಹಾತ್ಮಾ ಗಾಂಧೀಜಿ ಅವರು ಹೇಳಿದ್ದಾರೆ. ನಮ್ಮ ಪಕ್ಷದ ನಾಯಕರು ತಮ್ಮ ಉಸಿರು ಬಿಗಿ ಹಿಡಿದು ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ.

ಹೀಗಾಗಿ ನಾವೆಲ್ಲರೂ ಇಂದು ಪ್ರಜಾಪ್ರಭುತ್ವ ಉಳಿಸುತ್ತೇನೆ, ಸಂವಿಧಾನ, ದೇಶದ ಚುನಾವಣಾ ವ್ಯವಸ್ಥೆ ಹಾಗೂ ಮತಗಳನ್ನು ಕಾಪಾಡುತ್ತೇನೆ, ತೆರಿಗೆ ಅಸಮಾನ ಹಂಚಿಕೆ ವಿರುದ್ಧ ಹೋರಾಡುತ್ತೇನೆ, ದೇಶದಲ್ಲಿ ಸರ್ವಾಧಿಕಾರ ತೊಲಗಿಸಿ ಮತ್ತೆ ಜನಪರ ಸರ್ಕಾರ ತರುತ್ತೇವೆ ಎಂಬ ಐದು ಶಪಥಗಳನ್ನು ನಾವು ಮಾಡಬೇಕಿದೆ” ಎಂದು ಕರೆ ಕೊಟ್ಟರು.

“ಈ ಐದು ಶಪಥಗಳನ್ನು ನಾವು ಪ್ರತಿ ನಿತ್ಯ ಸ್ಮರಿಸಬೇಕು. 2029ರ ವೇಳೆಗೆ 2ನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆಯಬೇಕಾದ ಅಗತ್ಯವಿದೆ. ಸ್ವಾತಂತ್ರ್ಯ ದಿನ ನಮ್ಮ ಇತಿಹಾಸ ಹೇಳುವ ದಿನ. ಇದು ಭಾರತೀಯರು ಹಾಗೂ ಕನ್ನಡಿಗರಾದ ನಮ್ಮ ಹೆಮ್ಮೆಯ ದಿನ. ದೇಶದ ಮೊಟ್ಟ ಮೊದಲ ಸ್ವಾತಂತ್ರ್ಯ ಸಂಗ್ರಾಮವಾಗಿದ್ದು ಕರ್ನಾಟಕದಲ್ಲೇ. ಶಿವಮೊಗ್ಗ ಜಿಲ್ಲೆಯ ಈಸೂರು, ಸ್ವಾತಂತ್ರ್ಯ ಸಂಗ್ರಾಮ ಘೋಷಿಸಿದ ಮೊದಲ ಗ್ರಾಮ.

ಬ್ರಿಟೀಷರನ್ನು ಮೊದಲು ಮಣಿಸಿದ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರು. ಕಾಂಗ್ರೆಸ್ ಮುಖಂಡ ಹನುಮಂತರಾವ್ ಅವರ ಮುಖಂಡತ್ವದಲ್ಲಿ 1930ರಲ್ಲಿ ಅಂಕೋಲದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾಗಿದ್ದನ್ನು ನಾವು ಸ್ಮರಿಸಿಕೊಳ್ಳಬೇಕಾಗಿದೆ. ಹೀಗೆ ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡಿಗರು ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದಾರೆ. ಈ ಇತಿಹಾಸವನ್ನು ಮೆಲುಕು ಹಾಕಬೇಕು” ಎಂದರು.

“ಸ್ವಾತಂತ್ರ್ಯ ಹೋರಾಟದಲ್ಲಿ ಆರೂವರೆ ಲಕ್ಷ ಜನ ಕಾಂಗ್ರೆಸಿಗರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಸಾವಿರಾರು ಮಂದಿ ತಮ್ಮ ಮನೆ ಮಠ ಹಾಗೂ ಜೀವನವನ್ನೇ ತ್ಯಾಗ ಮಾಡಿದ್ದಾರೆ. ನಾವು ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಿದರೆ ಸಾಲದು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಎಂಬುದನ್ನು ಹೊಸ ಪೀಳಿಗೆಗೆ ತಿಳಿಸಬೇಕಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಧೈರ್ಯದಿಂದ ಹೇಳಬೇಕು.

ಎಲ್ಲಿಯವರೆಗೆ ನಮಗೆ ಈ ಧೈರ್ಯ ಬರುವುದಿಲ್ಲವೋ ಅಲ್ಲಿಯವರೆಗೆ ದೇಶದ್ರೋಹಿಗಳು ನಮಗದೆ ರಾಷ್ಟ್ರಭಕ್ತಿಯ ಪಾಠ ಮಾಡುತ್ತಲೇ ಇರುತ್ತಾರೆ. ಸ್ವಾತಂತ್ರ್ಯಕ್ಕಾಗಿ ಮಹಾತ್ಮಾ ಗಾಂಧಿ, ನೆಹರೂ, ಸರ್ದಾರ್ ಪಟೇಲ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ ಎಂಬ ಸುಳ್ಳು ಸುದ್ದಿ ಹಬ್ಬಿಸಿಕೊಂಡು ಬರುತ್ತಿದ್ದಾರೆ. ನೆಹರೂ ಅವರು 9 ವರ್ಷಗಳ ಕಾಲ ಜೈಲು ಅನುಭವಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದಲ್ಲಿ ಅಂದು ದೇಶ ಒಗ್ಗೂಡಿತ್ತು. ಸ್ವಾತಂತ್ರ ಹೋರಾಟದಲ್ಲಿ ಮೌಲಾನಾ ಅಜಾದ್, ದಾದಾಬಾಯಿ ನವರೇಜಿ, ಬಾಲಗಂಗಾಧರ ತಿಲಕ್, ಮಹತ್ಮಾ ಗಾಂಧಿ, ನೆಹರೂ, ಅಂಬೇಡ್ಕರ್, ವಲ್ಲಭಬಾಯಿ ಪಟೇಲ್ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ಸರೋಜಿನಿ ನಾಯ್ಡು, ಲಾಲಾಲಜಪತರಾಯ್, ಗೋಪಾಲಕೃಷ್ಣ ಗೋಖಲೆ, ಬಿಪಿನ್ ಚಂದ್ರಪಾಲ್ ಸೇರಿದಂತೆ ಅನೇಕ ಮಹನೀಯರ ಹೋರಾಟವಿದೆ. ಅವರ ಇತಿಹಾಸವನ್ನು ನಾವೆಲ್ಲರೂ ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮ ಕರ್ತವ್ಯ. ದೇಶಕ್ಕಾಗಿ ತಮ್ಮ ತನು, ಮನ, ಧನ ಅರ್ಪಿಸಿದವರು ಕಾಂಗ್ರೆಸಿಗರು ಮಾತ್ರ” ಎಂದರು.

ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಅನೇಕ ಸಂದರ್ಭಗಳಲ್ಲಿ ಪ್ರತಿಪಕ್ಷಗಳು ಕೇಳುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ, ರಾಷ್ಟ್ರಗೀತೆ, ರಾಷ್ಟ್ರಧ್ವಜ ತಂದುಕೊಟ್ಟಿದ್ದು ಕಾಂಗ್ರೆಸ್ ಎಂಬುದನ್ನು ಸಾರಬೇಕು. ನಮ್ಮ ಹೆಗಲ ಮೇಲೆ ತಿರಂಗಾ, ಎದೆಯ ಮೇಲೆ ಸಂವಿಧಾನವಿದೆ. ಹೀಗಾಗಿ ನಾವು ಸಮಾಜದಲ್ಲಿ ಮಾನವೀಯತೆ ಸ್ವಾತಂತ್ರ್ಯ ಸ್ಮರಿಸಬೇಕು. ಮಾನಸಿಕ, ಕಾನೂನಾತ್ಮಕ, ವೈಯಕ್ತಿಕ, ಧಾರ್ಮಿಕ, ಬೌದ್ಧಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ವಾತಂತ್ರ್ಯವನ್ನು ದೇಶಕ್ಕೆ ಕೊಟ್ಟವರು ಕಾಂಗ್ರೆಸ್. ಸಂವಿಧಾನದ ಅಡಿಯಲ್ಲಿ ಬದುಕುವ, ತಮಗೆ ಬೇಕಾದ ಜನಪ್ರತಿನಿಧಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಟ್ಟಿದ್ದೂ ಕಾಂಗ್ರೆಸ್” ಎಂದು ತಿಳಿಸಿದರು.

ಸಂವಿಧಾನ ವಿರೋಧಿಗಳು, ಮತಗಳ್ಳತನದ ವಿರುದ್ಧ ಹೋರಾಡಬೇಕಿದೆ

“ಕುತಂತ್ರಗಳ ಮೂಲಕ ಈ ಸ್ವಾತಂತ್ರ್ಯಕ್ಕೆ ಧಕ್ಕೆ ತರುವವರು ಸಂವಿಧಾನ ವಿರೋಧಿಗಳು ಮಾತ್ರವಲ್ಲ, ಜೀವನದ ವಿರೋಧಿಗಳು. ಸಮಾಜಘಾತುಕರು ಎಂದು ಪರಿಗಣಿಸಬೇಕು. ಇವರನ್ನು ಸ್ವಾತಂತ್ರ್ಯದ ವೈರಿಗಳೆಂದು ಪರಿಗಣಿಸಬೇಕು. ದೇಶದ ಹಿತದೃಷ್ಟಿಯಿಂದ ಸಂವಿಧಾನಕ್ಕೆ ಆಗುವ ಮೋಸ ತಡೆಯಬೇಕು. ಸಂವಿಧಾನದ ಆಶಯಗಳನ್ನು ಉಳಿಸಬೇಕು. ಇಂದು ಮತ ಕಳ್ಳತನ ದೇಶದ ಗೌರವಕ್ಕೆ ಧಕ್ಕೆ ತರುವಂತಾಗಿದೆ.

ಇದರ ವಿರುದ್ಧದ ಹೋರಾಟಕ್ಕೆ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಕರ್ನಾಟಕದಿಂದಲೇ ಮುನ್ನುಡಿ ಬರೆದಿದ್ದಾರೆ. ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಎರಡೂ ವರೆ ವರ್ಷಗಳ ನಿಮ್ಮ ಪರಿಶ್ರಮದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಜನರ ಬದುಕಿನ ಬಗ್ಗೆ ಆಲೋಚಿಸಿ ರಾಜಕಾರಣ ಮಾಡುತ್ತಿದೆ. ಆದರೆ ವಿರೋಧ ಪಕ್ಷಗಳು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿದ್ದಾರೆ” ಎಂದರು.

“ಮುಂದಿನ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾವು ಸಜ್ಜಾಗಬೇಕಿದೆ. ಮುಂದಿನ ಆರು ತಿಂಗಳಲ್ಲಿ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ನೀವೆಲ್ಲರೂ ಇದಕ್ಕಾಗಿ ಶ್ರಮಿಸಬೇಕು. 2028ರಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಜನರ ಬದುಕಿಗೆ ಹೊಸರೂಪ ನೀಡಲು ಕೆಲಸ ಮಾಡಬೇಕು” ಎಂದು ಕರೆ ನೀಡಿದರು.


Spread the love

LEAVE A REPLY

Please enter your comment!
Please enter your name here