ವಿಜಯಸಾಕ್ಷಿ ಸುದ್ದಿ, ರೋಣ: ಸಣ್ಣ ರೈತರು ಸೇರಿದಂತೆ ಎಲ್ಲ ರೈತರು ಇನ್ನುಮುಂದೆ ಎನ್.ಎ ಮಾಡಿಸುವಂತಿಲ್ಲ ಎಂದು ಶಾಸಕ ಹಾಗೂ ರಾಜ್ಯ ಖನಿಜ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ಅವರು ಶುಕ್ರವಾರ ರೋಣ ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 79ನೇ ಸ್ಚಾತಂತ್ರ್ಯ ದಿನಚಾರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾವಂತ ಯುವಕರು ತಮ್ಮ ಸ್ವಂತ ಜಮೀನಿಗಳಲ್ಲಿ ಸ್ವ-ಉದ್ಯೋಗ ಮಾಡಿಕೊಳ್ಳಲು ಸರಕಾರಕ್ಕೆ ಅಥವಾ ಗ್ರಾ.ಪಂಗಳಿಗೆ ತೆರಿಗೆ ಕಟ್ಟುವ ಅವಶ್ಯಕತೆಯಿಲ್ಲ. ಹೀಗಾಗಿ ವಿದ್ಯಾವಂತ ಯುವಕರು ಸ್ವ-ಉದ್ಯೋಗದಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾವಂತ ಯುವಕರು ಸರಕಾರಿ ನೌಕರಿಗಳನ್ನು ಬಯಸುವ ಮೊದಲು ಸರಕಾರ ಜಾರಿಗೆ ತಂದಿರುವ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಗೌರವದ ಸ್ಥಾನ ಪಡೆಯಬೇಕು ಎಂದರು.
ತಾಲೂಕಿನಲ್ಲಿ ನಿರಂತರ ಮಳೆಯಿಂದ ಮುಂಗಾರು ಹಂಗಾಮಿನ ಎಲ್ಲ ಬೆಳೆಗಳು ಹಾನಿಗೊಳಗಾಗಿವೆ. ಈಗಾಗಲೇ ರಾಜ್ಯ ಸರಕಾರದ ಗಮನವನ್ನು ಸೆಳೆಯುವ ಮೂಲಕ ರೈತರಿಗೆ ಪರಿಹಾರ ವಿತರಣೆ ಮಾಡಲು ಕೋರಲಾಗಿದೆ. ಪರಿಹಾರದ ಹಣ ಶೀಘ್ರವೇ ರೈತರ ಖಾತೆಗೆ ಜಮೆಯಾಗಲಿದೆ. ಹಿಂಗಾರು ಹಂಗಾಮಿನ ಕಡಲೆ ಬೆಳೆ ವಿಮಾ ಹಣ ಬಿಡುಗಡೆಯಾಗಿದ್ದು, ರೈತರ ಖಾತೆಗೆ ಜಮಾ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ತಹಸೀಲ್ದಾರ ನಾಗರಾಜ ಕೆ ದ್ವಜಾರೋಹಣ ನೆರವೇರಿಸಿದರು. ಪುರಸಭೆ ಅಧ್ಯಕ್ಷೆ ಬಸ್ಸಮ್ಮ ಕೊಪ್ಪದ, ಉಪಾಧ್ಯಕ್ಷ ಹನ್ಮಂತಪ್ಪ ತಳ್ಳಿಕೇರಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ, ತಾ.ಪಂ ಇಒ ಚಂದ್ರಶೇಖರ ಕಂದಕೂರ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.