ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ಮಾರನಬಸರಿ, ಗೋಗೇರಿ ಮತ್ತು ಮುಶಿಗೇರಿ ಗ್ರಾ.ಪಂ ವ್ಯಾಪ್ತಿಯ ಅಮೃತ ಸರೋವರದ ದಂಡೆಯ ಮೇಲೆ ಸಂಭ್ರಮದಿಂದ ಸ್ವಾತಂತ್ರ‍್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಲಾಯಿತು.
ಮಾರನಬಸರಿ ಅಮೃತ ಸರೋವರದ ದಂಡೆಯ ಮೇಲಿನ ಧ್ವಜಾರೋಹಣ ಕಾರ್ಯಕ್ರಮ ಗಮನಸೆಳೆಯಿತು. ದೂರದ ಪಶ್ಚಿಮ ಬಂಗಾಳದಲ್ಲಿ ಭಾರತ-ಬಾಂಗ್ಲಾ ಗಡಿಯಲ್ಲಿ ಬಿಎಸ್‌ಎಫ್ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಾಲೂಕಿನ ಬೂದಿಹಾಳ ಗ್ರಾಮದ ಯೋಧೆ ಸಾವಿತ್ರಿ ಮುತ್ತಪ್ಪ ಚಿಗರಿ ಅವರು ಅಮೃತ ಸರೋವರ ದಂಡೆಯ ಮೇಲೆ 79ನೇ ಸ್ವಾತಂತ್ರ‍್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದ್ದು ವಿಶೇಷವಾಗಿತ್ತು. ಬಿ.ಎ ಪದವಿ ಪಡೆದಿರುವ ಯೋಧೆ ಸಾವಿತ್ರಿ ಅವರು ಕಳೆದ 12 ವರ್ಷಗಳಿಂದ ಬಾಂಗ್ಲಾ ಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಧ್ವಜಾರೋಹಣಕ್ಕಾಗಿ ಸ್ವಗ್ರಾಮ ಬೂದಿಹಾಳಕ್ಕೆ ಬಂದು ಮಾರನಬಸರಿ ಗ್ರಾ.ಪಂ ಆಯೋಜಿಸುವ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಧ್ವಜಾರೋಹಣ ನೆರವೇರಿಸುತ್ತಿದ್ದಾರೆ.
ಧ್ವಜಾರೋಹಣದ ಬಳಿಕ ಮಾತನಾಡಿದ ಯೋಧೆ ಸಾವಿತ್ರಿ, ದೇಶದ ಭದ್ರತೆಗಾಗಿ ನಾವೆಲ್ಲ ಶ್ರಮಿಸಬೇಕು. ದೇಶ ಸುಭದ್ರವಾಗಿದ್ದರೆ ನಾವೆಲ್ಲ ನಮ್ಮ ಮನೆಗಳಲ್ಲಿ ಸ್ವಚ್ಛಂದವಾಗಿರಲು ಸಾಧ್ಯ. ಮಾರನಬಸರಿ ಗ್ರಾ.ಪಂ ಸಿಬ್ಬಂದಿ ನನ್ನನ್ನು ಗುರುತಿಸಿ ಧ್ವಜಾರೋಹಣಕ್ಕೆ ಪ್ರತಿ ವರ್ಷ ಆಹ್ವಾನಿಸುತ್ತಿರುವುದು ಸಂತಸ ತಂದಿದೆ ಎಂದರು. ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಮಹಿಳಾ ಸೈನಿಕರ ಪರಾಕ್ರಮ ನೆನಪು ಮಾಡಿಕೊಂಡ ಯೋಧೆ ಸಾವಿತ್ರಿ, ದೇಶಕ್ಕಾಗಿ ಇನ್ನೂ 8 ವರ್ಷ ಸೈನಿಕರಾಗಿ ಸೇವೆ ಸಲ್ಲಿಸುವ ಅಭಿಲಾಷೆ ಹೊಂದಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಮೂರು ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ ಮೇಟಿ, ಶರಣಪ್ಪ ನರೇಗಲ್, ಎಸ್.ಆರ್. ಸಂಕನೂರ, ಗ್ರಾಮದ ಹಿರಿಯರು, ಶಾಲಾ ಮಕ್ಕಳು, ಮುಖ್ಯೋಪಾಧ್ಯಾಯರು, ಗ್ರಾ.ಪಂ ಮತ್ತು ನರೇಗಾ ಸಿಬ್ಬಂದಿ ವರ್ಗದವರಿದ್ದರು.
ಯೋಧೆ ಸಾವಿತ್ರಿ ಮುತ್ತಪ್ಪ ಚಿಗರಿ ಅವರಿಗೆ ಗ್ರಾ.ಪಂ ವ್ಯಾಪ್ತಿಯ ಮಾಜಿ ಸೈನಿಕರಾದ ವಿರೂಪಾಕ್ಷಪ್ಪ ಭಜಂತ್ರಿ, ರುದ್ರಪ್ಪ ಹಲಗೇರಿ, ಕಳಕವ್ವ ಹೊಸಮನಿ, ಶಿವಶರಣಪ್ಪ ಅಬ್ಬಿಗೇರಿ, ದಿವಂಗತ ಆನಂದ ಗುತ್ಯಪ್ಪನವರ ಪತ್ನಿ ಶೋಭಾ ಗುತ್ಯಪ್ಪನವರ ಸಾಥ್ ನೀಡಿದರು.