ಕೊಪ್ಪಳ:- ಇಲ್ಲಿನ ತುಂಗಭದ್ರಾ ಡ್ಯಾಂನ 7 ಗೇಟ್‌ಗಳಿಗೆ ಡ್ಯಾಮೇಜ್ ಆಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ..
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ಗೇಟ್ ನಂಬರ್ 4, 11, 18, 20, 24, 27 ಹಾಗೂ 28ನೇ ಗೇಟ್ ಸೇರಿದಂತೆ 7 ಗೇಟ್ ಗಳು ಬೆಂಡ್ ಆಗಿವೆ. ಇದರಲ್ಲಿ, 6 ಗೇಟ್ ಗಳನ್ನು ಮೇಲೆ ಎತ್ತಲು ಹಾಗೂ ಇಳಿಸಲು ಆಗುತ್ತಿಲ್ಲ. ಗೇಟ್ ನಂಬರ್ 4 ಅನ್ನು ಕೇವಲ ಎರಡು ಅಡಿ ಮಾತ್ರ ಮೇಲಕ್ಕೆ ಎತ್ತಬಹುದು. ಗೇಟ್ ನಂಬರ್ 4 ಸೇರಿದಂತೆ ಒಟ್ಟು ಏಳು ಗೇಟ್ ಗಳು ಡ್ಯಾಮೇಜ್ ಆಗಿವೆ ಎಂದು ತಿಳಿಸಿದರು.
ಒಂದು ಗೇಟ್ ಕೊಚ್ಚಿ ಹೋದಾಗಲೇ ಅಪಾರ ಪ್ರಮಾಣದ ನೀರು ಪೋಲಾಗಿತ್ತು. ಇದೀಗ ಏಳು ಗೇಟ್ ಗಳು ಬೆಂಡ್ ಆಗಿದ್ದು, ಯಾವಾಗ ಏನಾಗುತ್ತದೆ ಎಂಬ ಆತಂಕ ಕಾಡುತ್ತಿದೆ. ಈ ಬಾರಿ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ ಕಾರಣ ಹೆಚ್ಚಿನ ಪ್ರಮಾಣದ ನೀರು ಜಲಾಶಯಕ್ಕೆ ಬಂದಿದೆ. ನೀರಿನ ಒತ್ತಡದಿಂದ ಈ 7 ಗೇಟ್ ಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಕಳೆದ ವರ್ಷ ಆಗಸ್ಟ್ 10 ರಂದು ತುಂಗಭದ್ರಾ ಜಲಾಶಯದ ಗೇಟ್ ನಂಬರ್ 19 ಕೊಚ್ಚಿ ಹೋಗಿತ್ತು. ಒಂದು ವರ್ಷವಾದರೂ ಹೊಸ ಗೇಟ್ ಅಳವಡಿಸಿಲ್ಲ. ಈ ನಡುವೆ ಇದೀಗ ಏಳು ಗೇಟ್ ಗಳು ಡ್ಯಾಮೇಜ್ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಗೇಟ್ ಕಿತ್ತು ಹೋದ ಸಮಯದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊಸ ಗೇಟ್ ಅಳವಡಿಸುವ ಕೆಲಸ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದರು.