ವಿಜಯಸಾಕ್ಷಿ ಸುದ್ದಿ, ಗದಗ: ಪ್ರಜಾಪ್ರಭುತ್ವದ ಆಡಳಿತದಲ್ಲಿ ಪ್ರಜೆಗಳಿಗೆ ತೀವ್ರವಾಗಿ ಸ್ಪಂದಿಸಿ, ಪಾರದರ್ಶಕತೆ ಮೆರೆಯಲು ಗದಗ ನಗರದಲ್ಲಿ ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ಸಮಸ್ಯೆಗೆ ತ್ವರಿತಗತಿಯಲ್ಲಿ ಪರಿಹಾರ ಸಿಗಬೇಕು ಎನ್ನುವ ಉದ್ದೇಶದಿಂದ ದೇಶದಲ್ಲೇ ಪ್ರಥಮ ಬಾರಿಗೆ `ಪ್ರಭುವಿನೆಡೆಗೆ ಪ್ರಜಾಪ್ರಭುತ್ವ’ ಕಾರ್ಯಕ್ರಮ ಮಾಡಲಾಗುತ್ತಿದೆ. ದೇಶದ ಪ್ರಜೆಗೆ ಪ್ರಭುವಿನ ಪಟ್ಟ ಇದೆ. ಪ್ರಜೆಗಳನ್ನು ಅಧಿಕಾರಸ್ಥರನ್ನಾಗಿ ಮಾಡಲಾಗುತ್ತಿದ್ದು, ತ್ವರಿತಗತಿಯಲ್ಲಿ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯಕ್ರಮ ಇದಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಸಂಸದೀಯ ವ್ಯವಹಾರ, ಶಾಸನ ರಚನೆ, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ‍್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಈ ಕಲ್ಪನೆ ದೇಶದಲ್ಲಿಯೇ ಮೊದಲು. ಹಿಂದಿನ ಅರಸರ ಕಾಲದಲ್ಲಿ ನಾಗರಿಕರಿಗೆ ತೊಂದರೆ ಆದಾಗ ನ್ಯಾಯದ ಘಂಟೆಯನ್ನು ಬಾರಿಸಬೇಕಾಗಿತ್ತು. ಆದರೆ, ಈಗ ಕಾಲ ಬದಲಾಗಿದ್ದು, ಬಟನ್ ಒತ್ತುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಬಟನ್ ಒತ್ತಿದಾಕ್ಷಣ ಕಮಾಂಡ್ ಸೆಂಟರ್‌ನವರು ಮಾಹಿತಿ ಪಡೆಯುತ್ತಾರೆ. ಜನರ ದೂರು ಆಲಿಸಿ ತಕ್ಷಣ ಸಂಬಂಧಿಸಿದವರಿಗೆ ಕಳುಹಿಸಿಕೊಡುತ್ತಾರೆ. ಇದರಿಂದ ಕೆಲವೇ ಗಂಟೆಗಳಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈ ಕಾರ್ಯಕ್ರಮವನ್ನು ನಗರದ 10 ಕಡೆಗಳಲ್ಲಿ ಜಾರಿಗೋಳಿಸಲಾಗುತ್ತಿದ್ದು, ಆಗಸ್ಟ್ 15ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಜವಳಗಲ್ಲಿಯಲ್ಲಿ ಉದ್ಘಾಟನೆ ಮಾಡಿದ್ದೇವೆ ಎಂದರು.
ಅಂಜಿಕೆ, ಭಯ ಇಲ್ಲದೆ ದೂರು ನೀಡುವ ವಿನೂತನ ವ್ಯವಸ್ಥೆ ಇದಾಗಿದ್ದು, ಇದರಿಂದ ಆಡಳಿತ ವ್ಯವಸ್ಥೆ ಚುರುಕುಗೊಳ್ಳುತ್ತದೆ. ದೂರು ನೀಡಿದಾಗ ವೆಬ್‌ಸೈಟ್‌ನಲ್ಲಿ ಫೈಲ್ ಕ್ರಿಯೇಟ್ ಆಗುತ್ತದೆ. ಇದರಿಂದ ದೂರು ನೀಡಿದ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಈ ಕಾರ್ಯಕ್ರಮ ಮಾಡಲು ಜಿಲ್ಲಾಡಳಿತದಿಂದ ಸಾಕಷ್ಟು ಸೂಚನೆ, ಸಲಹೆ, ಮಾರ್ಗದರ್ಶನ ಪಡೆದಿದ್ದೇವೆ. ಪ್ರಜೆಗಳು ಈ ವ್ಯವಸ್ಥೆ ಒಪ್ಪಿಕೊಳ್ಳುತ್ತಾರೆ. ಆದರೆ, ಆಡಳಿತದಲ್ಲಿ ಇರುವರು ಇದನ್ನು ಒಪ್ಪುವುದು ಕಠಿಣ. ಆದರೂ, ನಮಗೆ ಎಷ್ಟೆ ತೊಂದರೆ ಆದರೂ ಜನರಿಗಾಗಿ ಈ ವ್ಯವಸ್ಥೆ ಜಾರಿಗೊಳಿಸುತ್ತಿದ್ದೇವೆ. ಯಾವುದೇ ಭೀತಿಯಿಲ್ಲದೇ ಡಿಸಿ, ಎಸ್ಪಿ, ಸಿಇಓ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ಸಲ್ಲಿಸಬಹುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಜಿಲ್ಲಾ ವಾರ್ತಾಧಿಕಾರಿ ವಸಂತ ಮಾಡ್ಲೂರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಅಸೂಟಿ, ಸಿದ್ದಲಿಂಗೇಶ ಪಾಟೀಲ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಸವರಾಜ ಬಳ್ಳಾರಿ, ನಾಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
“ನಗರದಲ್ಲಿನ ಥರ್ಡ್ ಐ ವ್ಯವಸ್ಥೆಯಿಂದ ಮನೆಗಳ್ಳತನ, ಸುಲಿಗೆ, ಅಪಘಾತಗಳು ಶೇ. 25 ಇಳಿಮುಖವಾಗಿವೆ. ಕೊಲೆ ಪ್ರಕರಣಗಳನ್ನು ತಕ್ಷಣ ಪತ್ತೆ ಹಚ್ಚಲಾಗುತ್ತಿದ್ದು, ಕ್ರೈಂ ಪ್ರಕರಣಗಳು ಕಡಿಮೆ ಆಗಿವೆ. ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣಗಳು ತೀರಾ ಕಡಿಮೆ ಆಗಿವೆ. ಸಮಾಜದ ಹಿತಕ್ಕಾಗಿ ಹೊಸ ಹೊಸ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಜಾರಿಗೆ ತಂದು ಯಶಸ್ವಿಯಾಗುತ್ತಿದ್ದೇವೆ. ಒಟ್ಟಾರೆಯಾಗಿ ಪ್ರಜೆಗಳು ನೆಮ್ಮದಿಯಿಂದ ಬದುಕಬೇಕು ಎನ್ನುವುದೇ ಕರ್ನಾಟಕ ಸರ್ಕಾರದ ಮೂಲ ಉದ್ದೇಶವಾಗಿದೆ”
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಹಿರಿಯ ನಾಗರಿಕರ ರಕ್ಷಣೆ, ಅಕ್ರಮ ಮದ್ಯ ಮಾರಾಟ, ರಸ್ತೆ ಸುರಕ್ಷತಾ ಕ್ರಮ, ಸಮಾಜ ದ್ರೋಹಿ ಚಟುವಟಿಕೆ, ಅನುಮಾನಾಸ್ಪದ ವಸ್ತುಗಳು, ಜಮೀನು ಹಕ್ಕುಗಳ ಪ್ರಕರಣ, ಪಿಂಚಣಿ ಸಂಬಂಧಿಸಿದ ಪ್ರಕರಣ, ಪಂಚಾಯಿತಿ ಸೇವೆವೆ ಸೇರಿದಂತೆ ಇನ್ನಿತರ ವಿಷಯಗಳಿಗೆ ಸಂಬಂಧಿಸಿ ಸಾರ್ವಜನಿಕರು ಮುಕ್ತವಾಗಿ ದೂರು ಸಲ್ಲಿಸಬಹುದು.