HomeGadag Newsಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಮಹನೀಯರ ಪಾತ್ರ ಅಪಾರ

ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಮಹನೀಯರ ಪಾತ್ರ ಅಪಾರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶತಮಾನಗಳ ದಾಸ್ಯತ್ವವನ್ನು ಕಳಚಿ ಸ್ವತಂತ್ರವಾದ ಭಾರತ, ತನ್ನ 78 ವರ್ಷಗಳನ್ನು ಪೂರ್ಣಗೊಳಿಸಿ ಇಂದು 79ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಗದಗ ಜಿಲ್ಲೆಯ ಮಹನೀಯರ ಪಾತ್ರ ಅಪಾರವಾಗಿದೆ ಎಂದು ಕಾನೂನು, ಪ್ರವಾಸೋದ್ಯಮ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ನುಡಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಜರುಗಿದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಸಚಿವರು ಮಾತನಾಡಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ತೋರಿದ ವಿನೂತನವಾದ ಸತ್ಯ, ಅಹಿಂಸೆ ಎಂಬ ಅಸ್ತ್ರಗಳನ್ನು ಹಿಡಿದು ಸತ್ಯಾಗ್ರಹ ಮಾರ್ಗದಿಂದ ಬ್ರಿಟೀಷ್ ಆಡಳಿತದ ವಿರುದ್ಧ ನಮ್ಮ ಹಿರಿಯರು ಹೋರಾಡಿದರು. ಅಸಂಖ್ಯಾತ ಭಾರತೀಯರು ಮಾಡಿದ ತ್ಯಾಗ-ಬಲಿದಾನದಿಂದಾಗಿ ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದರು. ನಮ್ಮ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನ, ಶ್ರಮ, ಸಮರ್ಪಣಭಾವ, ದೇಶಪ್ರೇಮದ ಫಲವಾಗಿ ಇಂದು ಸ್ವಾತಂತ್ರ್ಯ ಸುಖ ಅನುಭವಿಸುತ್ತಿದ್ದೇವೆ. ಸತ್ಯಾಗ್ರಹವು ಸ್ವಾತಂತ್ರ್ಯ ಸಂಗ್ರಾಮ ಮತ್ತು ತದನಂತರ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪ್ರಬಲ ಅಸ್ತ್ರವಾಗಿ ಪರಿಣಮಿಸಿ ಅನೇಕ ಆಂದೋಲನ ಮತ್ತು ಚಳವಳಿಗಳಿಗೆ ಯಶ ತಂದುಕೊಡುವಲ್ಲಿ ಪರಿಣಾಮಕಾರಿಯಾದ ಪಾತ್ರ ನಿಭಾಯಿಸುತ್ತಿದೆ ಎಂದು ತಿಳಿಸಿದರು.

ಗದಗ ಪರಿಸರದಲ್ಲಿ ನಡೆದ ಸ್ವಾತಂತ್ರ‍್ಯ ಹೋರಾಟ ಚಳುವಳಿಯ ಇತಿಹಾಸ ರೋಚಕವಾಗಿದೆ. ಗದಗ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟ 1857ರಿಂದಲೇ ಆರಂಭಗೊಳ್ಳುತ್ತದೆ. ನರಗುಂದದ ಬಾಬಾಸಾಹೇಬ, ಮುಂಡರಗಿಯ ಭೀಮರಾವ್, ಡಂಬಳದ ಕೆಂಚನಗೌಡ, ಅನಂತರಾವ್ ಜಾಲಿಹಾಳ, ಡಾ. ವಾಸುದೇವರಾವ್ ಉಮಚಗಿ, ಬೆಟಗೇರಿಯ ತ್ರಿಮಲ್ಲೇ, ಮಳೇಕರ, ಜಯರಾಮಾಚಾರ್ಯ ಮಳಗಿ, ಡಂಬಳದ ಶ್ರೀನಿವಾಸರಾವ್ ಕಳ್ಳಿ, ತಿಪ್ಪಣ್ಣ ಶಾಸ್ತ್ರಿ ಅಂದಾನಪ್ಪ ದೊಡ್ಡಮೇಟಿ, ಕೌತಾಳ ವೀರಪ್ಪ, ಕೆ.ಎಚ್. ಪಾಟೀಲರು ಸೇರಿ ಅಸಂಖ್ಯ ಸ್ವಾತಂತ್ರ‍್ಯ ಸೇನಾನಿಗಳ ಹೋರಾಟ ಅವಿಸ್ಮರಣೀಯ. ಡಾ. ಬಿ.ಜಿ. ಹುಲಗಿ, ಶಂಕ್ರಪ್ಪ ಗುಡ್ಡದ, ಇಸ್ಮಾಯಿಲ ಸಾಹೇಬ, ಕಲ್ಲೂರ ರಾಮಚಾರಿ, ವೆಂಕಟೇಶ ಮಾಗಡಿ, ಕೋಗನೂರ ನಿಂಗಪ್ಪ ಮೊದಲಾದವರು ಬ್ರಿಟೀಷರನ್ನು ಎದುರಿಸಿ ಕಠಿಣ ಶಿಕ್ಷೆ ಅನುಭವಿಸಿದರು. ಈ ಎಲ್ಲ ಮಹಾನ್ ನಾಯಕರಿಗೆ ಸಹಸ್ರ ನಮನಗಳನ್ನು ಸಲ್ಲಿಸೋಣ ಎಂದು ತಿಳಿಸಿದರು.

ಸಿವಿಲ್ ಪ್ರಕರಣಗಳಲ್ಲಿ ರಾಜಿಸಂಧಾನ ಕಡ್ಡಾಯಗೊಳಿಸಿ, ಶೀಘ್ರ ನ್ಯಾಯದಾನಕ್ಕೆ ದಿಟ್ಟ ಹೆಜ್ಜೆಯನ್ನಿಟ್ಟು, ಕರ್ನಾಟಕದಲ್ಲಿ ನ್ಯಾಯಕ್ಕಾಗಿ ಕಕ್ಷಿದಾರರು ದಶಕಗಟ್ಟಲೆ ಕಾಯುವುದಕ್ಕೆ ಮುಕ್ತಿ ನೀಡಲಾಗಿದೆ. ಈ ತಿದ್ದುಪಡಿಯು ತಕ್ಷಣದಿಂದ ಕರ್ನಾಟಕದಲ್ಲಿ ಜಾರಿಗೆ ಬಂದಿದೆ. ಕರ್ನಾಟಕ ರಾಜ್ಯವನ್ನು ಆರ್ಥಿಕ ಅಭಿವೃದ್ಧಿಯೆಡೆಗೆ ಕೊಂಡೊಯ್ದು ಹಲವಾರು ಕೈಗಾರಿಕೆಗಳ ಸ್ಥಾಪನೆಗೆ ನಾಂದಿ ಹಾಡಲಾಯಿತು. ಅಭಿವೃದ್ಧಿಯ ಫಲಿತಾಂಶಗಳು ಎಲ್ಲರಿಗೂ ಸಮಾನವಾಗಿ ತಲುಪುವಂತೆ ಪ್ರಾದೇಶಿಕ ಅಸಮತೋಲನೆಯನ್ನು ನಿವಾರಣೆ ಮಾಡಲು ಮಹತ್ವದ ಹೆಜ್ಜೆಯನ್ನು ಇಡಲಾಯಿತು. ರಸ್ತೆಗಳು, ಸೇತುವೆಗಳು, ಪ್ರಮುಖ ನೀರಾವರಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ವೇಗವಾಗಿ ಸಾಗಿದೆ ಎಂದರು.

ಸಮಾರಂಭದಲ್ಲಿ ವಿ.ಪ ಸದಸ್ಯ ಎಸ್.ವಿ. ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ, ಅರಣ್ಯ ವಸತಿ ವಿಹಾರ ಧಾಮಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಕಿಮಠ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“2023ರಲ್ಲಿ ಜನತೆಯ ಆಶೀರ್ವಾದದಿಂದ ನಮ್ಮ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ನಂತರ, ದಕ್ಷ, ಜನಪರ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದೆ. ಬಡವರ, ಅವಕಾಶ ವಂಚಿತರ, ಶೋಷಣೆಗೆ ಒಳಗಾದವರ ಪರ ಗಟ್ಟಿಯಾಗಿ ನಿಂತು ಸಾಮಾಜಿಕ, ಆರ್ಥಿಕ, ನ್ಯಾಯ ನೀಡುವ, ನಾಡಿನ ಜನತೆಯ ದೈನಂದಿನ ಬವಣೆಗಳನ್ನು ನೀಗಿಸಲು 5 ಗ್ಯಾರಂಟಿಗಳನ್ನು ಜನತೆಗೆ ಕೊಡಮಾಡಿದ ಕೀರ್ತಿ ಸಿ.ಎಂ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ”

– ಡಾ. ಎಚ್.ಕೆ. ಪಾಟೀಲ.

ಜಿಲ್ಲಾ ಉಸ್ತುವಾರಿ ಸಚಿವರು.

ಸ್ವಾತಂತ್ರ್ಯದ ನಂತರ, ಭಾರತಕ್ಕೆ ಹಲವಾರು ಸೌಕರ್ಯಗಳ ಕೊರತೆಗಳು ಕಾಡಿದ್ದವು. ವಿಶೇಷವಾಗಿ ಕೃಷಿ, ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಮೂಲ ಸೌಕರ್ಯ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ಸಾಧಿಸುವ ಸವಾಲನ್ನು ಎದುರಿಸಿ, ಭಾರತವನ್ನು ಕಟ್ಟುತ್ತಾ ಸಾಗಿ ಜಗತ್ತಿನಲ್ಲಿ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ. ಬಲಿಷ್ಠ ಮತ್ತು ಶ್ರೀಮಂತ ರಾಷ್ಟ್ರಗಳ ಪೈಪೋಟಿಯನ್ನು ಎದುರಿಸಿ ಪ್ರಪಂಚವೇ ಭಾರತವನ್ನು ಗುರುತಿಸುವಂತೆ ಸಾಧನೆ ಮಾಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ನುಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!