ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಭಾರತವಿಂದು ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದರೂ ಸಹ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಹತ್ತಾರು ಸಮಸ್ಯೆಗಳು ಕಾಡುತ್ತಿವೆ. ಸ್ವಾತಂತ್ರ್ಯೋತ್ಸವದ ಸಂಭ್ರಮದ ಸುವರ್ಣ ಘಳಿಗೆಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರು ಸ್ವಚ್ಛತೆ, ಆರೋಗ್ಯಯುತ ಸಮಾಜದ ನಿರ್ಮಾಣಕ್ಕಾಗಿ ಸಹಕರಿಸಬೇಕಾಗಿದೆ ಎಂದು ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ ಹೇಳಿದರು.
ಅವರು ಪುರಸಭೆಯ ಆವರಣದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಬೆಳೆಯುತ್ತಿರುವ ಪಟ್ಟಣದ ಜನತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ, ಸೇವೆ ಮಾಡಲಾಗುತ್ತಿದೆ. ಅದಕ್ಕೆ ಸರ್ಕಾರದಿಂದ ಹೆಚ್ಚಿನ ನೆರವು ಅಗತ್ಯವಿದೆ. ಪೌರ ಕಾರ್ಮಿಕರ ಕೊರತೆಯಿಂದ ಪಟ್ಟಣದ ಸ್ವಚ್ಛತೆ ಸಮಸ್ಯೆ ಹೆಚ್ಚುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಪುರಸಭೆಯ ಉಪಾಧ್ಯಕ್ಷ ಫಿರ್ಧೋಸ್ ಆಡೂರ, ಸದಸ್ಯರಾದ ಪ್ರವೀಣ ಬಾಳಿಕಾಯಿ, ಮಹೇಶ ಹೊಗೆಸೊಪ್ಪಿನ, ಜಯಮ್ಮ ಅಂದಲಗಿ, ಜಯಮ್ಮ ಕಳ್ಳಿ, ಎಸ್.ಕೆ. ಹವಾಲ್ದಾರ, ರಾಜಣ್ಣ ಕುಂಬಿ ಮಾತನಾಡಿದರು.
ಪುರಸಭೆ ನಿ.ಪೌರ ಕಾರ್ಮಿಕರು, ಪುರಸಭೆಯ ಶಿಕ್ಷಣ ಸಂಸ್ಥೆಯ ನಿವೃತ್ತ ನೌಕರರರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸಭೆಯಿಂದ ಸನ್ಮಾನಿಸಲಾಯಿತು. ಮುಖ್ಯಾಧಿಕಾರಿ ಮಾಂತೇಶ ಬೀಳಗಿ ಪ್ರಾಸ್ತಾವಿಕ ನುಡಿದರು. ಪುರಸಭೆಯ ಸದಸ್ಯರು, ಸಿಬ್ಬಂದಿ, ಪುರಸಭೆಯ ಅಂಗ ಶಿಕ್ಷಣ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು, ಪೌರ ಕಾರ್ಮಿಕರು ಇದ್ದರು. ಹನಮಂತ ನಂದೆಣ್ಣವರ ನಿರೂಪಿಸಿದರು.