ಹಾಸನ:- ಶ್ರೀ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಧರ್ಮಸ್ಥಳ ಚಲೋ ರ್ಯಾಲಿಗೆ ಹಾಸನದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಬೃಹತ್ ರ್ಯಾಲಿಗೆ ಬೂವನಹಳ್ಳಿ ಬೈಪಾಸ್ನಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದ್ದಾರೆ. ಸ್ವಾಗತ ಕೋರುತ್ತಿದ್ದಂತೆ `ಧರ್ಮಸ್ಥಳದೊಂದಿಗೆ ನಾವಿದ್ದೇವೆ’ ಎಂಬ ಘೋಷ ವಾಕ್ಯವನ್ನು ಕಾರ್ಯಕರ್ತರು ಕೂಗಿದ್ದಾರೆ.
ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಈ ರ್ಯಾಲಿ ನಡೆಯುತ್ತಿದೆ. ರ್ಯಾಲಿಯಲ್ಲಿ ಸುಮಾರು 400 ಕ್ಕೂ ಹೆಚ್ಚು ವಾಹನಗಳಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದಾರೆ. ನೆಲಮಂಗಲ-ಕುಣಿಗಲ್ ರಸ್ತೆಯ ಕುಣಿಗಲ್ ಟೋಲ್ಗೇಟ್ನಿಂದ ಯಾತ್ರೆ ಆರಂಭಗೊಂಡಿತ್ತು. ಈಗ ಹಾಸನದಿಂದ ಸಕಲೇಶಪುರದ ಮೂಲಕ ಶಿರಾಡಿಘಾಟ್ ರಸ್ತೆ ಮಾರ್ಗವಾಗಿ ರ್ಯಾಲಿ ಧರ್ಮಸ್ಥಳಕ್ಕೆ ತೆರಳಲಿದೆ.
ರ್ಯಾಲಿಯಲ್ಲಿ ನೂರಾರು ಜನ ಭಗವಾಧ್ವಜ ಹಿಡಿದು ಕೇಸರಿ ಶಾಲು ಧರಿಸಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಶಾಸಕರ ನಿಯೋಗವೂ ಭಾನುವಾರ ಧರ್ಮಸ್ಥಳಕ್ಕೆ ಭೇಟಿ ಮಾಡಲಿದೆ. ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಬಿಜೆಪಿ ಶಾಸಕರು ನಿಯೋಗದಲ್ಲಿರಲಿದ್ದಾರೆ.