ವಿಜಯಸಾಕ್ಷಿ ಸುದ್ದಿ, ಡಂಬಳ: ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮುರುಡಿ ತಾಂಡಾ ಗ್ರಾಮದಿಂದ ರಮೇಶ ಬೂದಿಹಾಳ ಪುರುಷರ ವಿಭಾಗದಲ್ಲಿ ಕಂಚಿನ ಪದಕ ಗೆದ್ದು, ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಸರ್ಫರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಪ್ರಶಂಸನೀಯ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ರೋಣ ಮತಕ್ಷೇತ್ರ ವ್ಯಾಪ್ತಿಯ ಡಂಬಳ ಹೋಬಳಿಯ ಮುರುಡಿ ತಾಂಡಾದ ನಿವಾಸಿ ರಮೇಶ ಬೂದಿಹಾಳ ಚೆನೈನಲ್ಲಿ ನಡೆದ ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ಹಿನ್ನೆಲೆಯಲ್ಲಿ ವ್ಹಿ.ಆರ್. ಗುಡಿಸಾಗರರ ನಿವಾಸದಲ್ಲಿ ಸನ್ಮಾನಿಸಿ ಮಾತನಾಡಿ, ಎಸ್.ಆರ್. ಪಾಟೀಲ ಪ್ರತಿಷ್ಠಾನದಿಂದ 1 ಲಕ್ಷ ರೂ ಪ್ರೋತ್ಸಾಹಧನ ನೀಡುವುದಾಗಿ ಹೇಳಿದರು.
ವಿದ್ಯಾಭ್ಯಾಸದೊಂದಿಗೆ ಕ್ರೀಡಾ ಚಟುವಟಿಕೆಯಲ್ಲಿ ಯುವಕರು ತಮ್ಮನ್ನು ತೊಡಗಿಸಿಕೊಂಡಾಗ ಉತ್ತಮ ಆರೋಗ್ಯದ ಜೊತೆಗೆ ಉತ್ತಮ ಸಾಧನೆ ಮಾಡಬಹುದು ಎನ್ನುವುದನ್ನು ರಮೇಶ ಬೂದಿಹಾಳ ತೋರಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆದರಳ್ಳಿ ಗವಿಮಠದ ಡಾ. ಕುಮಾರ ಮಹಾರಾಜರು, ವಕೀಲರಾದ ವ್ಹಿ.ಆರ್. ಗುಡಿಸಾಗರ ಮಾತನಾಡಿ, ರಮೇಶ ಬೂದಿಹಾಳರ ಸಾಧನೆ ನಮ್ಮ ರಾಜ್ಯದ ಮತ್ತು ಗದಗ ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಇವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಇನ್ನಷ್ಟು ಪ್ರೋತ್ಸಾಹ ಸಿಗುವಂತಾಗಲಿ. ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರು ಎಸ್.ಆರ್. ಪಾಟೀಲ ಪ್ರತಿಷ್ಠಾನದಿಂದ 1 ಲಕ್ಷ ರೂ ಪ್ರೋತ್ಸಾಹಧನ ನೀಡುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುಸೂಪ್ ಈಟಗಿ, ಹಾಲೇಶ ಹಳ್ಳಿ, ವಸಂತ ಮಾಳಗಿಮನಿ, ಬಸುರಾಜ ಜಗ್ಗಲ್, ಬಸುರಾಜ ನವಲಗುಂದ, ಪಿ.ಬಿ. ಅಳಗವಾಡಿ, ಯಚ್ಚರಗೌಡ ಗೋವಿಂದಗೌಡರ, ಶೇಖರ ಪವಾರ, ಮನೋಜ ರಾಠೋಡ ಸೇರಿದಂತೆ ಮುರುಡಿ ತಾಂಡಾ ಗ್ರಾಮಸ್ಥರು ಇದ್ದರು.