ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗದಗ-ಹಾವೇರಿ ಭಾಗದ ರೈತರ ಶಾಶ್ವತ ನೀರಾವರಿಗಾಗಿ ಬೇಡ್ತಿ-ವರದಾ ನದಿ ಜೋಡಣೆಯ ಮಹತ್ವಾಕಾಂಕ್ಷಿ ಯೋಜನೆ ಸಾಕಾರಗೊಳ್ಳಲೇಬೇಕು. ಅದಕ್ಕಾಗಿ ಪಕ್ಷಾತೀತ ಹೋರಾಟ ಮತ್ತು ರಾಜಕೀಯ ಇಚ್ಛಾಶಕ್ತಿಯನ್ನು ಸಂಸದ ಬಸವರಾಜ ಬೊಮ್ಮಾಯಿ ತೋರಬೇಕಿದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಆಗ್ರಹಿಸಿದ್ದಾರೆ.
ಅವರು ಸೋಮವಾರ ಲಕ್ಷ್ಮೇಶ್ವರದಲ್ಲಿ ನಡೆದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಬೇಡ್ತಿ-ವರದಾ ನದಿ ಜೋಡಣೆಯಾದರೆ ಗದಗ, ಹಾವೇರಿ, ಕೊಪ್ಪಳ ರಾಯಚೂರ ಭಾಗದ ಜನರ, ರೈತರ ಬರಗಾಲದ ಬವಣೆ ತಪ್ಪುತ್ತದೆ. ಶಾಶ್ವತ ನೀರಾವರಿ ಕ್ಷೇತ್ರವಾಗಿ ಜನರು ಆರ್ಥಿಕ ಸಂಕಷ್ಟದಿಂದ ದೂರವಾಗಿ ಸಮೃದ್ಧಿ, ಸಂತೋಷದ ಬದುಕು ಕಟ್ಟಿಕೊಳ್ಳುತ್ತಾರೆ. ಪ್ರತಿವರ್ಷ 200 ಟಿಎಂಸಿಗಿಂತ ಹೆಚ್ಚು ನೀರು ವೃಥಾ ಹರಿದು ಸಮುದ್ರ ಸೇರುತ್ತದೆ. ಕೇವಲ 25 ಕಿಮೀ ಅಂತರದಲ್ಲಿರುವ ಬೇಡ್ತಿ-ವರದಾ ನದಿ ಜೋಡಣೆಯಾದರೆ ಕುಡಿಯುವ ನೀರು, ನೀರಾವರಿಯಿಂದ ಕ್ಷೇತ್ರ ಸಮೃದ್ಧವಾಗುತ್ತದೆ ಎಂದರು.
ಈ ಬಗ್ಗೆ ಕಳೆದ 25 ವರ್ಷಗಳಿಂದ ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು, ನೀರಾವರಿ ಸಚಿವರಿಗೆ ಮನವಿ ಮಾಡುತ್ತಲೇ ಬಂದಿದ್ದೇನೆ. ಕೇಂದ್ರ ಸರ್ಕಾರದ ಪಾಲು ಶೇ.90ರಷ್ಟಿದೆ ಮತ್ತು ಇದಕ್ಕೆ ರಾಜ್ಯ ಸರ್ಕಾರದ ಸಹಭಾಗಿತ್ವವೂ ಬೇಕು. ನೀರಾವರಿ ಇಲಾಖೆಯ ರಾಜ್ಯ ಸಚಿವ ವಿ. ಸೋಮಣ್ಣ, ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ, ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ, ಪ್ರಭಾವಿ ಸಚಿವರಾದ ಹೆಚ್.ಕೆ. ಪಾಟೀಲ ಮತ್ತು ಈ ಭಾಗದ ಮಠಾಧೀಶರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.