ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಸಿಎಂ ಕುರ್ಚಿ ಖಾಲಿನೇ ಆಗಿಲ್ಲ. ಆಗಲೇ ಟವಲ್ ಹಾಕೊ ಕೆಲಸ ಕಾಂಗ್ರೆಸ್‌ನಲ್ಲಿ ಶುರುವಾಗಿದೆ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಲೇವಡಿ ಮಾಡಿದರು.
ಕೊಪ್ಪಳದಲ್ಲಿ ಬುಧವಾರ ಜಿಲ್ಲಾ ಬಿಜೆಪಿ ಕಾರ್ಯಾಲಯದ ಕಟ್ಟಡ ಕಾಮಗಾರಿ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿಯಲ್ಲಿ ಭಿನ್ನಮತವೂ ಇಲ್ಲ, ಭಿನ್ನಾಭಿಪ್ರಾಯವೂ ಇಲ್ಲ. ಅವೆಲ್ಲ ಕಾಂಗ್ರೆಸ್‌ನಲ್ಲಿ ಇವೆ ಎಂದು ಕುಟುಕಿದರು.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಬಣ ರಾಜಕೀಯ ಶುರುವಾಗಿದೆ. ಸಿಎಂ ಹುದ್ದೆ ಸಲುವಾಗಿ ಮ್ಯೂಜಿಕ್ ಚೇರ್ ಆಟ ನಡೆದಿದ್ದು ಸಿದ್ದು, ಡಿಕೆಶಿ ಟವಲ್ ಹಾಕಲು ಶುರು ಮಾಡಿದ್ದಾರೆ ಎಂದರು.
ಕಾಂಗ್ರೆಸ್‌ನ ಪರಿಸ್ಥಿತಿ ಹೇಗಿದೆ ಎಂದರೆ ಮದುವೆಗೆ ಮುಂಚೆನೇ ಮಕ್ಕಳ ಬಗ್ಗೆ ಯೋಚಿಸಿದಂತಾಗಿದೆ. ಬಿಜೆಪಿ ಶಿಸ್ತಿನ ಪಕ್ಷ, ನಮ್ಮಲ್ಲಿ ಒಗ್ಗಟ್ಟಿದೆ. ರಾಜ್ಯದ 9 ಕಡೆ ಜಿಲ್ಲಾ ಬಿಜೆಪಿ ಕಚೇರಿಯ ಕಟ್ಟಡ ಕಾಮಗಾರಿ ನಡೆದಿವೆ. ಅದರಲ್ಲಿ ಕೊಪ್ಪಳ ಸಹ ಒಂದು. ಕೊಪ್ಪಳ ಜಿಲ್ಲೆಯ ಬಿಜೆಪಿ ಜಿಲ್ಲಾ ಕಚೇರಿ ಕಟ್ಟಡ ಮೂರನೇ ಮಹಡಿವರೆಗೆ ಕಾಮಗಾರಿ ನಡೆಯುತ್ತಿದ್ದು ತೀವ್ರವಾಗಿದೆ. ಬರುವ ದೀಪಾವಳಿ ಹಬ್ಬದೊಳಗೆ ಜಿಲ್ಲಾ ಬಿಜೆಪಿ ಕಚೇರಿ ಉದ್ಘಾಟಿಸಲು ಚಿಂತನೆ ನಡೆದಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ ಮತ್ತಿತರರು ಇದ್ದರು.
ಕಾಂಗ್ರೆಸ್‌ನಲ್ಲಿ ಟವಲ್ ಹಾಕೊ ಕೆಲಸ ಶುರುವಾಗಿದೆ; ಕಟೀಲ್ ಲೇವಡಿ
Advertisement