ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಕೋಡಿಕೊಪ್ಪದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2007-08ರಲ್ಲಿ ಕಲಿತ ವಿದ್ಯಾರ್ಥಿಗಳಿಂದ ಗುರುವಂದನೆ ಮತ್ತು ಸ್ನೇಹ ಸಮ್ಮೇಲನ ಕಾರ್ಯಕ್ರಮ ಜರುಗಿತು.
ಶಿಕ್ಷಕ ವಿ.ವಿ. ಅಣ್ಣಿಗೇರಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶೈಕ್ಷಣಿಕ ಹಂತದಲ್ಲಿ ಮಕ್ಕಳಿಗೆ ನೈತಿಕ, ಮೌಲ್ಯಯುತ ಶಿಕ್ಷಣ ನೀಡಿ ಮಕ್ಕಳನ್ನು ಸಂಸ್ಕಾರಯುತ ಜೀವನದತ್ತ ಕೊಂಡೊಯ್ಯುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅಕ್ಷರಾಭ್ಯಾಸದ ಗುರು ಪರಂಪರೆಯಲ್ಲಿ ಶ್ರದ್ಧೆಯಿಂದ ಕಲಿತು ಇಂದಿಗೂ ಕಲಿಸಿದ ಗುರುಗಳು, ಗುರುಮಾತೆಯರನ್ನು ಸ್ಮರಿಸಿ ಅವರಿಗೆ ಗುರುವಂದನೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಇನ್ನೊರ್ವ ಶಿಕ್ಷಕ ಎಮ್.ಎಸ್. ಪಾಟೀಲ, ಈ ವಿದ್ಯಾರ್ಥಿಗಳು ನೆರವೇರಿಸುತ್ತಿರುವ ಗುರುವಂದನಾ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ. ಕಲಿತ ವಿದ್ಯಾ ಮಂದಿರ, ಕಲಿಸಿದ ಗುರುಗಳನ್ನು ಮರೆಯದೆ ಅವರು ಇಂತಹ ಅಭೂತಪೂರ್ವ ಕಾರ್ಯ ನೆರವೇರಿಸಿದ್ದಕ್ಕಾಗಿ ಅವರೆಲ್ಲರೂ ಅಭಿನಂದನಾರ್ಹರು ಎಂದರು.
2007-08ರ ವಿದ್ಯಾರ್ಥಿ ನಾಗನಗೌಡ ನಾಡಗೌಡ್ರ ಮಾತನಾಡಿ, ನಮ್ಮನ್ನು ಹೆತ್ತವರು ನಮ್ಮ ತಂದೆ-ತಾಯಿಗಳು. ಆದರೆ ನಮಗೆ ಶಿಕ್ಷಣವನ್ನು ನೀಡಿ, ತಮ್ಮ ಮಕ್ಕಳಂತೆ ನಮ್ಮನ್ನು ಕಂಡು ನಮಗೆ ಬದುಕಿನ ಪಾಠ ಹೇಳಿಕೊಡುವ ಪ್ರತಿ ಗುರುವೂ ನಮಗೆ ಎರಡನೇ ತಂದೆ-ತಾಯಿ ಇದ್ದಂತೆ. ಅವರ ಪೂಜೆಯನ್ನು ಗುರುವಂದನೆಯ ಮೂಲಕ ಮಾಡುತ್ತಿರುವ ನಾವು ನಿಜಕ್ಕೂ ಧನ್ಯರು ಎಂದರು.
ಅತಿಥಿಗಳಾಗಿ ನಿವೃತ್ತ ಶಿಕ್ಷಕಿ ಎ.ಐ ರಾಂಪೂರ, ಎಸ್.ಬಿ. ಕೊಟ್ಟೂರಶೆಟ್ಟರ, ಎ.ಜಿ. ಕಂದಾರಿ ಪಾಲ್ಗೊಂಡಿದ್ದರು. ಮುಖ್ಯೋಪಾಧ್ಯಾಯ ಸಂಗಯ್ಯ ಪ್ರಭುಸ್ವಾಮಿಮಠ ಅಧ್ಯಕ್ಷತೆ ವಹಿಸಿದ್ದರು. ಹಿಂದಿನ ವಿದ್ಯಾರ್ಥಿಗಳಾದ ಭೀಮಸಿ ಕುರಿ, ಮಂಜುನಾಥ ಚಿಕ್ಕೊಪ್ಪದ, ಹುಚ್ಚೀರೇಶ ಕುಂಬಾರ, ಅಶ್ವಿನಿ ಹೆಗಡೆ, ರಾಜೇಶ್ವರಿ ಜೂಚನಿ, ಅನಿತಾ ಅರಹುಣಸಿ, ಲಕ್ಷ್ಮೀ ರಾಠೋಡ, ಹುಸೇನಬಿ ನಿಶಾನದಾರ, ವಿಜಯಲಕ್ಷ್ಮೀ ಅಣ್ಣಿಗೇರಿಮಠ, ಉಮೇಶ ಕುಂಬಾರ, ಸಂಗೀತಾ ಹಿರೇಮಠ, ಹನಮಂತ ನವಲಗುಂದ, ಕಲ್ಲಯ್ಯ ಗುರುವಡೆಯರ ಹಾಗೂ ಜೀವನಸಾಬ ಅಮರಗೋಳ ಉಪಸ್ಥಿತರಿದ್ದರು. ಸಂತೋಷ ಉದ್ದಣ್ಣವರ ಸ್ವಾಗತಿಸಿದರು. ಕಳಕಪ್ಪ ಹಳ್ಳಿಕೇರಿ ನಿರೂಪಿಸಿದರು. ದೇವರಾಜ ಗಡಗಿ ವಂದಿಸಿದರು.