ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಳೆದರಡು ವಾರದಿಂದ ಸುರಿಯುತ್ತಿರುವ ಜಡಿ ಮಳೆಗೆ ಮುಂಗಾರಿನ ಬೆಳೆಗಳು ಮಣ್ಣು ಪಾಲಾಗುತ್ತಿವೆ. ಮುಖ್ಯವಾಗಿ ಕಟಾವಿನ ಹಂತದಲ್ಲಿರುವ ಹೆಸರು ಬೆಳೆ ಗಿಡದಲ್ಲಿಯೇ ಮೊಳಕೆಯೊಡೆದು ಹಾಳಾಗುತ್ತಿದೆ. ಮುಂಗಾರಿನ ಬಹುತೇಕ ಬೆಳೆಗಳು ವಿಪರೀತ ಮಳೆಯಿಂದ ಹಾನಿಗೀಡಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ರೈತರ ಪಾಲಿಗೆ ವರವಾಗಬೇಕಿದ್ದ ಮಳೆ ಶಾಪವಾಗಿ ಪರಿಣಮಿಸಿದೆ.
ಮೇ ಅಂತ್ಯ ಮತ್ತು ಜೂನ್ ಮೊದಲ ವಾರದಲ್ಲಿಯೇ ಬಿತ್ತನೆ ಮಾಡಿರುವ ಬೆಳೆಗೀಗ 80-90 ದಿನಗಳ ಕಾಲಾವಧಿ. ಜಿಟಿಜಿಟಿ ಮಳೆ, ಮೋಡ ಕವಿದ ವಾತಾವರಣದಿಂದ ಹೆಸರು ಬೆಳೆಗೆ ರೋಗಬಾಧೆ ತಗುಲಿ ಇಳುವರಿ ಮೊದಲೇ ಕುಂಠಿತವಾಗಿತ್ತು. ಖರ್ಚು ಮಾಡಿದಷ್ಟಾದರೂ ಬೆಳೆ ಬಂದರೆ ಸಾಕು ಎಂದಿದ್ದರು. ಇದೀಗ ಗಿಡದಲ್ಲಿ ಒಣಗಿರುವ ಕಾಯಿಯಲ್ಲಿನ ಕಾಳು ಮೊಳಕೆಯೊಡೆದು ಹಾಳಾಗುತ್ತಿದೆ. ರೈತನ ಪಾಲಿನ ಬೆಳೆ ಮತ್ತೆ ಭೂಮಿ ಪಾಲಾಗುತ್ತಿದೆ. ಈ ವರ್ಷ ಸರ್ಕಾರ ಪ್ರತಿ ಕ್ವಿಂಟಲ್ ಹೆಸರಿಗೆ 8768 ರೂ ಬೆಂಬಲ ಬೆಲೆ ಘೋಷಣೆ ಮಾಡಿದ್ದಲ್ಲದೇ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಬೆಳೆ ಮಾತ್ರ ಮಳೆ ನುಂಗಿದೆ.
ತಾಲೂಕಿನಲ್ಲಿ ಲಕ್ಷ್ಮೇಶ್ವರ ಸೇರಿ ದೊಡ್ಡೂರ, ಶಿಗ್ಲಿ, ಅಡರಕಟ್ಟಿ, ಗೊಜನೂರ, ಯತ್ತಿನಹಳ್ಳಿ, ಯಳವತ್ತಿ, ಮಾಡಳ್ಳಿ, ಹರದಗಟ್ಟಿ, ಆದ್ರಳ್ಳಿ, ಅಕ್ಕಿಗುಂದ, ಸೂರಣಗಿ, ಬಾಲೆಹೊಸೂರ, ರಾಮಗೇರಿ, ಬಸಾಪುರ, ಒಡೆಯರ ಮಲ್ಲಾಪುರ, ಗೋನಾಳ ಸೇರಿ ಈ ವರ್ಷ 5200 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಗುರಿ ಮೀರಿ 5850 ಹೆಕ್ಟೇರ್ ಗುರಿ ಮೀರಿ ಬಿತ್ತನೆ ಮಾಡಲಾಗಿದೆ. 20 ದಿನಗಳಿಂದ ಜಮೀನಿನಲ್ಲಿ ಕೆಲಸ ಮಾಡಲು ಸಾಧ್ಯವಾಗದೇ ಕಸ ಬೆಳೆದು ಜಮೀನುಗಳು ಸಂಪೂರ್ಣ ಹಾಳಾಗುವ ಸ್ಥಿತಿಗೆ ತಲುಪಿವೆ. ಹೆಸರು ಬೆಳೆಯಷ್ಟೇ ಅಲ್ಲದೆ ಶೇಂಗಾ, ಹತ್ತಿ, ಉಳ್ಳಾಗಡ್ಡಿ, ಮೆಕ್ಕೆಜೋಳ, ಮೆಣಸಿನಕಾಯಿ ಬೆಳೆಗಳೂ ಹಾಳಾಗಿ ಸಂಪೂರ್ಣ ಕೈಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಹೆಸರು ಬೆಳೆಗಾರರಾದ ಸೋಮನಗೌಡ ಪಾಟೀಲ, ರಾಜಣ್ಣ ಹವಳದ, ಈರಣ್ಣ ಆದಿ, ಬಸವರಾಜ ಮೆಣಸಿನಕಾಯಿ, ಚನ್ನಪ್ಪ ಷಣ್ಮುಕಿ ಸೇರಿದಂತೆ ಹಲವು ರೈತರು ಜಮೀನಿನಲ್ಲಿ ಹಾನಿಗೀಡಾದ ಹೆಸರು ಬೆಳೆಯಿಂದ ಮನನೊಂದು ತಮ್ಮ ಅಳಲನ್ನು ತೋಡಿಕೊಂಡರು. ಸಕಾಲಿಕ ಮಳೆಯಿಂದ ಈ ವರ್ಷ ಮುಂಗಾರಿನ ಬೆಳೆಗಳು ಸಮೃದ್ಧವಾಗಿಯೇ ಬೆಳೆದಿದ್ದವು. ಬೆಳೆ ಕಂಡು ಈ ವರ್ಷವಾದರೂ ಬದುಕು ಹಸನಾದೀತು ಎಂದು ನಂಬಿ ಪ್ರತಿ ಎಕರೆ ಹೆಸರು ಬಿತ್ತನೆಗೆ ಎಲ್ಲಾ ಖರ್ಚು ಸೇರಿ ಕನಿಷ್ಠ 20 ಸಾವಿರ ರೂ ಖರ್ಚು ಮಾಡಿದ್ದೆವು. ಆದರೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಭೂಮಿ ಪಾಲಾಗಿದೆ. ಹೀಗಾದರೆ ನಾವು ಹೇಗೆ ಬದುಕಬೇಕು ಎಂಬುದು ತಿಳಿಯದಂತಾಗಿದೆ. ಸರ್ಕಾರ ಅತಿವೃಷ್ಟಿ ಪರಿಹಾರ ಯೋಜನೆಯಡಿ ಹೆಸರು ಸೇರಿ ಮುಂಗಾರಿನಲ್ಲಿ ಹಾನಿಗೀಡಾದ ಎಲ್ಲ ಬೆಳೆಗಳಿಗೆ ಪ್ರತಿ ಎಕರೆಗೆ ಕನಿಷ್ಠ 20 ಸಾವಿರ ರೂ ಬೆಳೆಹಾನಿ ಪರಿಹಾರ, ಬೆಳೆವಿಮೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
“ತುಂತುರು ಮಳೆ, ಮೋಡಕವಿದ ವಾತಾವರಣದಿಂದ, ರೋಗಬಾಧೆಯಿಂದ ಇಳುವರಿ ಕುಂಠಿತವಾಗಿದೆ. ಸತತ ಮಳೆಯಿಂದ ಕಟಾವು ಮಾಡಲಾಗದೇ ಅವಧಿ ಮೀರಿ ಹೆಸರು ಬೆಳೆ ಗಿಡದಲ್ಲೇ ಹಾಳಾಗುತ್ತಿದೆ. ಬೆಳೆಹಾನಿ ಸ್ಥಿತಿಯ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು”
– ಚಂದ್ರಶೇಖರ ನರಸಮ್ಮನವರ.
ಸಹಾಯಕ ಕೃಷಿ ಅಧಿಕಾರಿ.
ಯಂತ್ರದ ಮೂಲಕ ಕಟಾವಿಗೆ ಅನುಕೂಲವಾಗಲಿ ಎಂದು ರಾಸಾಯನಿಕ ಸಿಂಪಡಣೆ ಮಾಡಿ ಬೆಳೆ ಒಣಗಿಸಿದ್ದಾರೆ. ಆದರೆ ಕಟಾವಿಗೆ ಬಂದ ಬೆಳೆಯನ್ನು ಮಷಿನ್ ಕಟಾವು ಮಾಡಲು ಮತ್ತು ಕೂಲಿ ಆಳಿಂದ ಬಿಡಿಸಿ ತರಲೂ ಮಳೆ ಬಿಡುವು ಕೊಡುತ್ತಿಲ್ಲ. ಇದರಿಂದ ಹೆಸರು ಗಿಡದಲ್ಲಿಯೇ ಮೊಳಕೆ ಬಂದು ಹಾಳಾಗುತ್ತಿರುವುದನ್ನು ಕಂಡು ರೈತ ಸಂಕಟಪಡುತ್ತಾ ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ.