ಕರ್ನಾಟಕದಲ್ಲಿ ಮಳೆ ಅಬ್ಬರ: ಈ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ – ಬುಧವಾರದ ಹವಾಮಾನ ಹೀಗಿದೆ!

0
Spread the love

ಬೆಂಗಳೂರು:- ಕರ್ನಾಟಕದಲ್ಲಿ ನಾಳೆ(ಬುಧವಾರವೂ) ಮಳೆ ಅಬ್ಬರ ಮುಂದುವರಿಯಲಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Advertisement

ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳು ಸೇರಿದಂತೆ ಹಲವು ಭಾಗಗಳಲ್ಲಿ ಇನ್ನು ಐದು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ, ಧಾರವಾಡ, ಹಾವೇರಿ, ಯಾದಗಿರಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ನಾಳೆ ಅಂದರೆ ಆಗಸ್ಟ್ 20ರಂದು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಬೆಳಗಾವಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ:

ಬೆಳಗಾವಿ ‌ಜಿಲ್ಲೆಯಾದ್ಯಂತ‌ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಹೀಗಾಗಿ, ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಆ.19 ರಂದು ರಜೆ ಘೋಷಣೆ ಮಾಡಲಾಗಿತ್ತು. ನಾಳೆಯೂ ಸಹ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ನಾಳೆ (ಬುಧವಾರ) ಕೂಡ ಬೆಳಗಾವಿ ‌ಜಿಲ್ಲೆಯ ಅಂಗನವಾಡಿ, ಶಾಲಾ ಹಾಗೂ ‌ಪಿಯು ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ‌ಮೊಹಮ್ಮದ್ ರೋಷನ್ ಅವರು ‌ಆದೇಶ ಹೊರಡಿಸಿದ್ದಾರೆ.

ಹಾವೇರಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ:

ಹಾವೇರಿ ಜಿಲ್ಲೆಯಲ್ಲಿ ಬುಧವಾರ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಂಗಳವಾರದಿಂದಲೇ ಹಾವೇರಿ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ನಿರಂತರ ಮಳೆಯ ಹಿನ್ನೆಲೆಯುಲ್ಲಿ ಬುಧವಾರ ಹಾವೇರಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ವಿಜಯ್ ‌ಮಹಾಂತೇಶ್ ಆದೇಶಿಸಿದ್ದಾರೆ.

ಧಾರವಾಡದಲ್ಲೂ ಶಾಲಾ-ಕಾಲೇಜುಗಳಿಗೆ ರಜೆ:

ಧಾರವಾಡ ಜಿಲ್ಲೆಯಲ್ಲೂ ಸಹ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಬುಧವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಧಾರವಾಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ , ಪಿಯುಸಿ ಹಾಗೂ ಪದವಿ ಕಾಲೇಜುಗಳಿಗೆ ರಜೆ ನೀಡಿ ಡಿಸಿ ದಿವ್ಯಾ ಪ್ರಭು ಆದೇಶ ಹೊರಡಿಸಿದ್ದಾರೆ. ಈ ರಜೆಯನ್ನು ಮುಂದಿನ ಸಾರ್ವತ್ರಿಕ ರಜಾ ದಿನಗಳಲ್ಲಿ ಹೊಂದಾಣಿಕೆ ಮಾಡಲು ಸೂಚಿಸಿದ್ದಾರೆ.

ಯಾದಗಿರಿಯಲ್ಲಿ ಶಾಲಾ-ಕಾಲೇಜಿಗೆ ರಜೆ ಮುಂದುವರಿಕೆ:

ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರಿದಿದೆ. ಹೀಗಾಗಿ ಜಿಲ್ಲೆಯ ಅಂಗನವಾಡಿ, ಶಾಲೆಗಳಿಗೆ ನಾಳೆಯೂ ಸಹ ರಜೆ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಡಿಡಿಪಿಐ ಚನ್ನಬಸಪ್ಪ ಆದೇಶ ಹೊರಡಿಸಿದ್ದಾರೆ. ಬಿಟ್ಟು ಬಿಡದ ಜಿಟಿಜಿಟಿ ಮಳೆಯಾಗುತ್ತಿರುವುದ ಶಾಲಾ ಕಾಲೇಜುಗಳಿಗೆ ಹೋಗಲು ಆಗದಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇದೀಗ ಬುಧವಾರವೂ ಸಹ ರಜೆ ವಿಸ್ತರಿಸಲಾಗಿದೆ.

ಇನ್ನು ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನ ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here