ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಳೆದ 15-20 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಬೆಳೆಹಾನಿ ಸಂಭವಿಸಿದೆ. ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದೆ. ಕೃಷಿ ಕೆಲಸಗಳು ಸ್ಥಗಿತಗೊಂಡಿವೆ. ವ್ಯಾಪಾರ-ವಹಿವಾಟು, ಶಿಕ್ಷಣ ಸೇರಿ ಇತರೆಲ್ಲ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸೋಮವಾರ ಮತ್ತು ಮಂಗಳವಾರ 2 ದಿನಗಳು ಒಂದಿಷ್ಟೂ ಬಿಡುವು ಕೊಡದಂತೆ ಜಡಿ ಮಳೆ ಸುರಿದಿದ್ದು ಜನರನ್ನು ಚಿಂತೆಗೀಡು ಮಾಡಿದೆ.
ನಿರಂತರ ಮಳೆಯಿಂದ ಮಣ್ಣಿನ ಮತ್ತು ಹಳೆಯದಾದ ಕಾಂಕ್ರಿಟ್ ಮನೆಗಳೂ ಸಹ ಸೋರುತ್ತಿವೆ. ಸೋರುವುದನ್ನು ತಪ್ಪಿಸಲು ಸಾವಿರಾರು ಖರ್ಚು ಮಾಡಿ ಪ್ಲಾಸ್ಟಿಕ್, ತಾಡಪತ್ರಿ ಖರೀದಿಸಿ ಮನೆಯ ಮೇಲೆ ಹೊದಿಸಿದ್ದರೂ ಸೋರಿಕೆ ತಪ್ಪುತ್ತಿಲ್ಲ ಮತ್ತು ಮಳೆಯೂ ನಿಲ್ಲುತ್ತಿಲ್ಲವಾದ್ದರಿಂದ ಜನತೆ ಪಡಬಾರದ ಯಾತನೆ ಅನುಭವಸುತ್ತಿದ್ದಾರೆ. ರೈತರಿಗೆ ಜಾನುವಾರುಗಳ ಪೋಷಣೆ ಕಷ್ಟವಾಗಿದೆ. ತಾಲೂಕಿನಾದ್ಯಂತ 25ಕ್ಕೂ ಹೆಚ್ಚು ಮನೆಗಳು ಬಿದ್ದಿರುವ ಬಗ್ಗೆ ತಾಲೂಕಾಡಳಿತ ಮಾಹಿತಿ ನೀಡಿದೆ. ಆದರೆ ನಿರಾಶ್ರಿತರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದ್ದರಿಂದ ಅವರ ಗೋಳು ಹೇಳತೀರದಾಗಿದೆ.
ಮಳೆ ಪ್ರಾರಂಭಗೊಂಡ 15-20 ದಿನಗಳಿಂದ ಬಿಸಿಲೇ ಇಲ್ಲದ ಕಾರಣ ತೊಳೆದು ಹಾಕಿದ ಬಟ್ಟೆಗಳು ಒಣಗುತ್ತಿಲ್ಲ. ದಿನವೂ ಶಾಲೆಗೆ ಹೋಗುವ ಮಕ್ಕಳು, ನೌಕರವರ್ಗದವರು ಹಳೆಯದಾದ ಬಟ್ಟೆಯನ್ನು ಧರಿಸಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಶಾಲಾ ಯೂನಿಫಾರ್ಮ್ ಗಳನ್ನು ಸಿದ್ಧಪಡಿಸಲು ತಾಯಂದಿರು ಪರದಾಡುತ್ತಿದ್ದಾರೆ. ಮನೆಯ ಒಳಗಡೆಯೇ ಹಗ್ಗ ಕಟ್ಟಿ ಒಣಹಾಕಿರುವ ಬಟ್ಟೆಗಳು ನಾಲ್ಕೈದು ದಿನ ಕಳೆದರೂ ಒಣಗುತ್ತಿಲ್ಲ. ಆಗಸ್ಟ್ 1ರಿಂದ 19ವರೆಗೆ 50 ಮಿಮೀ ಆಗಬೇಕಿದ್ದ ಮಳೆ 150 ಮಿಮೀ ಆಗಿದೆ. ಜೂನ್‌ದಿಂದ ಆಗಸ್ಟ್ 18ರವರೆಗೆ 200 ಮಿಮೀ ಆಗಬೇಕಿದ್ದ ಮಳೆ 300 ಮಿಮೀ ಆಗಿದೆ. ಒಟ್ಟಿನಲ್ಲಿ ಮುಂಗಾರು ವಾಡಿಕೆಗಿಂತ ಶೇ.50ರಷ್ಟು ಹೆಚ್ಚಾಗಿದ್ದರಿಂದ ವ್ಯತಿರಿಕ್ತ ಪರಿಣಾಮವಾಗಿದೆ.
ಕೃಷಿ ಮತು ದಿನಗೂಲಿ ಕೆಲಸಗಳು ಸ್ಥಗಿತಗೊಂಡಿದ್ದರಿಂದ ದಿನದ ದುಡಿಮೆಯಿಂದಲೇ ಜೀವನ ನಡೆಸುವ ಕೃಷಿ ಕೂಲಿಕಾರರ ಬದುಕು ಚಿಂತಾಜನಕವಾಗಿದೆ. ಮಳೆ ಹೀಗೇಯೇ ಮುಂದುವರೆದರೆ ಹೊತ್ತಿನ ಊಟಕ್ಕೂ ಕಷ್ಟಪಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಕೆಲಸವೂ ಇಲ್ಲ, ಕೂಲಿಯೂ ಇಲ್ಲದ್ದರಿಂದ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಗಿದೆ. ನಾಳೆ ಹೇಗೆ ಎಂಬ ಚಿಂತೆ ಕಾರ್ಮಿಕರನ್ನು ಕಾಡುತ್ತಿದ್ದು ಮಳೆರಾಯನ ಬಿಡುವಿಗೆ ಬೇಡುತ್ತಿದ್ದಾರೆ.