ವಿಜಯಸಾಕ್ಷಿ ಸುದ್ದಿ, ಗದಗ: ಪಿ.ಓ.ಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್)ಯಿಂದ ತಯಾರಾಗುವ ಮೂರ್ತಿಗಳ ಮಾರಾಟ ಮತ್ತು ಬಳಕೆಗೆ ಈ ಬಾರಿ ಕಟ್ಟುನಿಟ್ಟಾಗಿ ನಿರ್ಬಂಧ ಹೇರಲಾಗಿದೆ. ಪಿಓಪಿ ಮೂರ್ತಿಗಳು ನದಿಗಳಲ್ಲಿ ವಿಸರ್ಜನೆಗೊಂಡಾಗ ಜಲಮಾಲಿನ್ಯ ಉಂಟುಮಾಡುವ ಸಾಧ್ಯತೆ ಇರುವುದರಿಂದ ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೂಚಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಪೊಲೀಸ್ ಇಲಾಖೆ, ನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳು ಸರಿಯಾಗಿ ಸರ್ಕಾರದ ಮಾರ್ಗಸೂಚಿಗಳ ಪಾಲನೆಗೆ ಸೂಚನೆ ನೀಡಿದರು.
ಗಣೇಶ ಮೂರ್ತಿಗಳು ನದಿ ತಟಗಳಲ್ಲಿ ವಿಸರ್ಜನೆಗೊಂಡಾಗ ಜಲಚರಗಳಿಗೆ ಅಪಾಯ ಮತ್ತು ನೀರಿನ ಮಾಲಿನ್ಯ ಉಂಟಾಗುತ್ತದೆ. ಈ ಬಾರಿ ಗದಗ ಜಿಲ್ಲೆಯಲ್ಲಿ ಪಿಓಪಿ ಮೂರ್ತಿಗಳ ಮಾರಾಟ, ತಯಾರಿ ಹಾಗೂ ಉಪಯೋಗವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ ವ್ಯಾಪಾರಸ್ಥರಿಗೆ ಸ್ಥಳೀಯ ಸಂಸ್ಥೆಗಳಿಂದ ನೋಟಿಸ್ ನೀಡಲಾಗಿದ್ದು, ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ಪರಿಸರ ಸ್ನೇಹಿ ಮೂರ್ತಿಗಳಿಗೆ ಪ್ರೋತ್ಸಾಹವಿರಲಿ. ಕಲಾವಿದರಿಗೆ ಮಣ್ಣು ಮತ್ತಿತರ ಪರಿಸರ ಸ್ನೇಹಿ ವಸ್ತುಗಳಿಂದ ಮೂರ್ತಿಗಳ ತಯಾರಿಕೆಗೆ ಸಹಕಾರ ನೀಡಬೇಕು. ಪಟಾಕಿಗಳ ನಿಯಂತ್ರಿತ ಬಳಕೆ, ವಿಶೇಷವಾಗಿ ಹಸಿರು ಪಟಾಕಿಗಳ ಉಪಯೋಗವನ್ನು ಪ್ರೋತ್ಸಾಹಿಸಬೇಕಿದೆ. ಶಬ್ದ ಮತ್ತು ವಾಯು ಮಾಲಿನ್ಯ ತಡೆಯಲು ಈ ಕ್ರಮ ಅವಶ್ಯಕವೆಂದು ಜಿಲ್ಲಾಧಿಕಾರಿಗಳು ಒತ್ತಿ ಹೇಳಿದರು.
ಜಿಲ್ಲೆಯ ಪ್ರತಿ ಪಟ್ಟಣ ಹಾಗೂ ಗ್ರಾಮಗಳಲ್ಲಿ ತಾತ್ಕಾಲಿಕ ವಿಸರ್ಜನಾ ಗುಂಡಿಗಳನ್ನು ನಿರ್ಮಿಸಲು ಹಾಗೂ ಹಳ್ಳ-ಕಾಲುವೆಗಳಲ್ಲಿ ವಿಸರ್ಜನೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಮೂರ್ತಿಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ವಿಸರ್ಜಿಸಲು ಸಾರ್ವಜನಿಕರಿಗೆ ಪ್ರೋತ್ಸಾಹ ನೀಡಲು ಮನವಿ ಮಾಡಿದರು.
ಪರಿಸರ ರಕ್ಷಣೆ ನಮ್ಮ ಹೊಣೆಗಾರಿಕೆ. ಈ ಬಾರಿಯ ಗಣೇಶೋತ್ಸವ ಪರಿಸರ ಸ್ನೇಹಿಯಾಗಿ ಆಚರಿಸಿದರೆ, ಅದು ಮುಂದಿನ ಪೀಳಿಗೆಗೆ ಉತ್ತಮ ಸಂದೇಶವಾಗಲಿದೆ. ಸಾರ್ವಜನಿಕ ಗಣೇಶೋತ್ಸವ ಆಯೋಜಕರು ಪರವಾನಿಗೆಗಾಗಿ ಪದೇ ಪದೇ ಅಲೆಯುವುದನ್ನು ತಪ್ಪಸಲು ಏಕಗವಾಕ್ಷಿ ಅನುಮತಿ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು. ಪೊಲೀಸರು, ನಗರಸಭೆ, ವಿದ್ಯುತ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಈ ಕೇಂದ್ರದೊಂದಿಗೆ ಒಗ್ಗೂಡಲ್ಪಟ್ಟಿದ್ದು, ಎಲ್ಲಾ ಅನುಮತಿಗಳನ್ನೂ ಒಂದೇ ಅರ್ಜಿಯ ಮೂಲಕ ನೀಡಲಾಗುತ್ತದೆ. ಈ ಕುರಿತು ತುರ್ತಾಗಿ ಅಧಿಕಾರಿಗಳು ಏಕ ಗವಾಕ್ಷಿ ಕೇಂದ್ರ ತೆರೆದು ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಡಿವೈಎಸ್‌ಪಿ ಸಜ್ಜನರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ವಾರ್ತಾಧಿಕಾರಿ ವಸಂತ ಮಡ್ಲೂರ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ್, ಜಿಲ್ಲಾ ಪರಿಸರ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮತ್ತು ಗಣೇಶ ಮೂರ್ತಿ ತಯಾರಕರು, ವಿತರಕರು ಪಾಲ್ಗೊಂಡಿದ್ದರು.
“ಪರಿಸರ ಉಳಿಸುವುದು ನಮ್ಮೆಲ್ಲರ ಹೊಣೆಗಾರಿಕೆ. ದೇವರ ಆರಾಧನೆ ಜೊತೆಗೆ ಪ್ರಕೃತಿಯ ಹಿತ ಕಾಪಾಡುವುದು ಇಂದಿನ ಕಾಲದ ಅವಶ್ಯಕತೆ. ಎಲ್ಲರ ಸಹಕಾರದಿಂದ ಪರಿಸರ ಸ್ನೇಹಿ ಹಬ್ಬಕ್ಕೆ ನಾವು ಉದಾಹರಣೆಯಾಗಿ ನಿಲ್ಲೋಣ”
– ಸಿ.ಎನ್. ಶ್ರೀಧರ.
ಜಿಲ್ಲಾಧಿಕಾರಿಗಳು, ಗದಗ
ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಸ್ಪಷ್ಟಪಡಿಸಿದಂತೆ, ಧ್ವನಿವರ್ಧಕಗಳ ಬಳಕೆಗೆ ನಿಗದಿತ ಸಮಯದ ಮಿತಿಯನ್ನು ಅನುಸರಿಸಬೇಕಾಗುತ್ತದೆ. ರಾತ್ರಿ 10 ಗಂಟೆಯ ನಂತರ ಯಾವುದೇ ರೀತಿಯ ಸೌಂಡ್ ಸಿಸ್ಟಂ ಅಥವಾ ಲೌಡ್ ಸ್ಪೀಕರ್ ಬಳಸಕೂಡದು. ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿಯ ನಿಯಂತ್ರಣ ಮಟ್ಟ ಮೀರಿ ಶಬ್ದ ಮಾಡುವ ಧ್ವನಿವರ್ಧಕ ನಿಷೇಧಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.