ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಹೈಕೋರ್ಟ್ ನಿಂದ ಜಾಮೀನು ಪಡೆದು ಹೊರ ಬಂದಿದ್ದ ದರ್ಶನ್ ಅವರನ್ನು ಸುಪ್ರೀಂ ಕೋರ್ಟ್ ಮತ್ತೆ ಜೈಲಿಗೆ ಕಳುಹಿಸಿದೆ. ಇತ್ತ ದರ್ಶನ್ ನಟನೆಯ ಡೆವಿಲ್ ಸಿನಿಮಾದ ‘ಇದ್ರೆ ನೆಮ್ಮದಿಯಾಗಿರ್ಬೇಕುʼ ಹಾಡು ಬಿಡುಗಡೆಗೆ ಸಿದ್ದವಾಗಿತ್ತು. ಆದ್ರೆ ಕೊನೆ ಕ್ಷಣದಲ್ಲಿ ದರ್ಶನ್ ಜೈಲಿಗೆ ಹೋಗಿದ್ರಿಂದ ಹಾಡಿನ ಬಿಡುಗಡೆಯನ್ನು ಮುಂದೂಡಲಾಗಿತ್ತು. ಇದೀಗ ಚಿತ್ರತಂಡ ಹಾಡಿನ ಬಿಡುಗಡೆಗೆ ಮತ್ತೊಂದು ದಿನಾಂಕ ನಿಗದಿ ಮಾಡಿದೆ.
ಅಂದುಕೊಂಡಂತೆ ಆಗಿದ್ದಿದ್ರೆ ಆಗಸ್ಟ್ 15 ರಂದು ‘ಡೆವಿಲ್’ ಸಿನಿಮಾದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಹಾಡು ಬಿಡುಗಡೆ ಆಗಬೇಕಿತ್ತು. ಆದ್ರೆ ಅದಕ್ಕೆ ಒಂದು ದಿನ ಮುಂಚೆ ದರ್ಶನ್ ಅರೆಸ್ಟ್ ಆಗಿದ್ದರಿಂದ ಹಾಡು ಬಿಡುಗಡೆ ಮುಂದೂಡಲಾಯ್ತು. ಇದೀಗ ಈ ಹಾಡು ಬಿಡುಗಡೆಗೆ ಹೊಸ ದಿನಾಂಕ ನಿಗದಿ ಮಾಡಲಾಗಿದೆ. ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಹಾಡು ಆಗಸ್ಟ್ 24ಕ್ಕೆ ಬೆಳಿಗ್ಗೆ 10.05 ಕ್ಕೆ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ.
‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಎಂಬುದು ದರ್ಶನ್ ಅವರ ವೈರಲ್ ಆಡಿಯೋದಲ್ಲಿ ಇದ್ದ ಮಾತಾಗಿತ್ತು. ವರ್ಷಗಳ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಅಶ್ಲೀಲವಾಗಿ ಬೈದಾಗ ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಎಂಬ ವಾಕ್ಯವನ್ನು ದರ್ಶನ್ ಬಳಸಿದ್ದರು. ಆ ವಾಕ್ಯವನ್ನೇ ಬಳಸಿ ಈಗ ಹಾಡು ಮಾಡಲಾಗಿದೆ.
ಮೂಲಗಳ ಪ್ರಕಾರ ದರ್ಶನ್ ‘ಡೆವಿಲ್’ ಸಿನಿಮಾದ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ಸಿನಿಮಾದ ಚಿತ್ರೀಕರಣ, ಡಬ್ಬಿಂಗ್ ಎಲ್ಲ ಕಾರ್ಯವನ್ನೂ ಮುಗಿಸಿದ್ದಾರೆ. ಸಿನಿಮಾದ ಇನ್ನಿತರೆ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಮಾತ್ರವೇ ಬಾಕಿ ಉಳಿದಿದ್ದು, ಅವುಗಳು ಚಾಲ್ತಿಯಲ್ಲಿವೆ. ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಘೋಷಣೆ ಆಗಿತ್ತು. ದರ್ಶನ್ ಜೈಲಿಗೆ ಹೋಗಿದ್ದರಿಂದ ಸಿನಿಮಾ ಬಿಡುಗಡೆ ಇನ್ನೂ ಕೆಲ ತಿಂಗಳು ಬೇಕಾಗಬಹುದು ಎನ್ನಲಾಗುತ್ತಿದೆ.