ಬೆಂಗಳೂರು ದಕ್ಷಿಣ:- ಪೊಲೀಸ್ ಠಾಣೆಯ ಶೌಚಾಲಯದಲ್ಲೇ ಆರೋಪಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಎಂಕೆ ದೊಡ್ಡಿಯಲ್ಲಿ ಜರುಗಿದೆ.
ರಮೇಶ್ (59) ನೇಣಿಗೆ ಶರಣಾದ ಆರೋಪಿ. ಈತ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದುಂಡನಹಳ್ಳಿ ಗ್ರಾಮದ ನಿವಾಸಿ. ಆರೋಪಿ ರಮೇಶ್ ಎರಡು ತಿಂಗಳ ಹಿಂದೆ ಚನ್ನಪಟ್ಟಣ ತಾಲ್ಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ ದೇವಸ್ಥಾನವೊಂದರಲ್ಲಿ ಹುಂಡಿ ಕಳ್ಳತನ ಮಾಡಿದ್ದನು. ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳಾದ ರಮೇಶ್, ಮಂಜು ಮತ್ತು ಶ್ರೀನಿವಾಸ್ ಎಂಬುವರನ್ನು ಬಂಧಿಸಿದ್ದರು. ಆಗಸ್ಟ್ 18ರಂದು ಚನ್ನಪಟ್ಟಣದ ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆಂದು 3 ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಕದ್ದ ವಸ್ತುಗಳನ್ನು ಪೊಲೀಸರು ಆರೋಪಿಗಳಿಂದ ವಶಕ್ಕೆ ಪಡೆದಿದ್ದರು.
ಇಂದು ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಿತ್ತು. ಆದರೆ ಬೆಳಗ್ಗೆ 6:30ರ ಸುಮಾರಿಗೆ ಶೌಚಾಲಯಕ್ಕೆ ತೆರಳಿದ್ದ ಆರೋಪಿ ರಮೇಶ್, ತನ್ನ ಪಂಚೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ರಮೇಶ್ನ ಕುಟುಂಬಸ್ಥರು ಆಸ್ಪತ್ರೆ ಬಳಿ ಜಮಾವಣೆಗೊಂಡಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರ ಮೇಲೆ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.