ಗೌರಿ-ಗಣೇಶ ಹಬ್ಬಕ್ಕೆ ಕೌಂಟ್ ಡೌನ್: ಬಿಬಿಎಂಪಿಯಿಂದ ಮಾರ್ಗಸೂಚಿ ಪ್ರಕಟ!

0
Spread the love

ಬೆಂಗಳೂರು:- ಗೌರಿ-ಗಣೇಶ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಬಿಬಿಎಂಪಿಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ.

Advertisement

ಎಸ್, ಬೆಂಗಳೂರಿನಲ್ಲಿ ಪ್ರಸಕ್ತ 2025ನೇ ಸಾಲಿನ ಗೌರಿ-ಗಣೇಶ ಹಬ್ಬಕ್ಕೆ ಸಡಗರ ಸಂಭ್ರಮ ಮನೆ ಮಾಡಿದೆ. ಸ್ವಾಗತಿಸಲು ನಾಗರಿಕರು ಸಜ್ಜಾಗಿದ್ದಾರೆ. ಗಣೇಶ ಮೂರ್ತಿಗಳ ತಯಾರಿಕೆ ಈಗಾಗಲೇ ಪ್ರಾರಂಭವಾಗಿದೆ. ಗಣೇಶ ಮೂರ್ತಿಯ ತಯಾರಿಕೆಗಾಗಿ ಬಳಸುವ ರಾಸಾಯನಿಕ ಬಣ್ಣಗಳು, ಥರ್ಮಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಬೆಂಗಳೂರಿನಾದ್ಯಂತ ವಲಯವಾರು 75 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ ಮಾಡಲಾಗಿದ್ದು, ಇಲಾಖಾವಾರು ನೋಡಲ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ.

ಮಾರ್ಗಸೂಚಿಯಲ್ಲಿ ಏನಿದೆ?
1.ಗಣೇಶ ಹಬ್ಬದ ನಿಮಿತ್ತ ಸಾರ್ವಜನಿಕವಾಗಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲು ಉಪವಿಭಾಗ ಮಟ್ಟದಲ್ಲಿ ನೋಡಲ್ ಅಧಿಕಾರಿಗಳಾಗಿ ನೇಮಿಸಲಾದ ಸಹಾಯಕ ಕಾರ್ಯಪಾಲಕ ಅಭಿಯಂತರರುಗಳ ಕಾರ್ಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

2.ನೋಡಲ್ ಅಧಿಕಾರಿಗಳು ಪೊಲೀಸ್, ಬೆಸ್ಕಾಂ, ಅಗ್ನಿಶಾಮಕ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಭಿಪ್ರಾಯ ಪಡೆದು ಏಕಗವಾಕ್ಷಿಯಲ್ಲಿ ತ್ವರಿತವಾಗಿ ಅನುಮತಿ ನೀಡಲು ಕ್ರಮಕೈಗೊಳ್ಳಬೇಕು.

3.ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಸಾಯನಿಕ ಬಣ್ಣಗಳು, ಥರ್ಮಾಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಯ ತಯಾರಿಕೆಯನ್ನು ಸಂಪೂರ್ಣವಾಗಿ ನಿಷೇಧಗೊಳಿಸಬೇಕು.

4.ಸದರಿ ವಸ್ತುಗಳನ್ನು ಬಳಸಿ ತಯಾರಿಸುವ, ಮಾರಾಟ ಮಾಡುವ ಪ್ರದೇಶಗಳನ್ನು ಸಂಬಂಧಪಟ್ಟ ಬಿಬಿಎಂಪಿಯ ಉಪವಿಭಾಗದ ನೋಡಲ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಖುದ್ದಾಗಿ ಪರಿಶೀಲಿಸಿ ನೋಟಿಸ್ ನೀಡಬೇಕು.

5.ರಾಸಾಯನಿಕ ಬಣ್ಣಗಳು, ಥರ್ಮಾಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿ ತಯಾರಿಸುತ್ತಿದ್ದಲ್ಲಿ ಹಾಗೂ ಮಾರಾಟ ಮಾಡುತ್ತಿದ್ದಲ್ಲಿ ದಂಡ ವಿಧಿಸಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ, ನಿಷೇಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲು ಕ್ರಮವಹಿಸಬೇಕು.

6.ವಲಯ ಆಯುಕ್ತರು, ವಲಯ ಮಟ್ಟದಲ್ಲಿ ಮೇಲ್ವಿಚಾರಣೆ ನಡೆಸಬೇಕು. ವಶಪಡಿಸಿಕೊಳ್ಳಲಾದ ಮೇಲ್ಕಂಡ ವಸ್ತುಗಳನ್ನು ನಿಯಮಾನುಸಾರ ವಿಲೇವಾರಿಗೊಳಿಸಲು ಕ್ರಮವಹಿಸಬೇಕು.

7.ಗಣೇಶಮೂರ್ತಿ ತಯಾರಿಕೆದಾರರಿಗೆ ಪರಿಸರ ಸ್ನೇಹಿ/ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಮಾತ್ರ ತಯಾರಿಸಲು ಜಾಹೀರಾತು ನೀಡಬೇಕು.

8.ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ, ಬಕೇಟ್‌ಗಳಲ್ಲಿ ವಿಸರ್ಜನೆಗೊಳಿಸಿ, ಬರುವ ಮಣ್ಣನ್ನು ಕೈತೋಟಗಳಿಗೆ, ಹೂವಿನ ಕುಂಡಗಳಿಗೆ ಬಳಸಲು ಅರಿವು ಮೂಡಿಸಬೇಕು.

9.ದೊಡ್ಡ ಗಾತ್ರದ ಮೂರ್ತಿಗಳ ವಿಸರ್ಜನೆಗೆ ಬಿಬಿಎಂಪಿ ವ್ಯಾಪ್ತಿಯ ವಾರ್ಡ್ಗಳಲ್ಲಿ ವಿಸರ್ಜನೆ/ನಿಮಜ್ಜನ ಸ್ಥಳಗಳನ್ನು ಗುರುತಿಸಿ, ಸದರಿ ಸ್ಥಳಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಚುರಪಡಿಸಬೇಕು.

10.ವಾರ್ಡ್ ವ್ಯಾಪ್ತಿಯಲ್ಲಿ ಸಂಚಾರಿ ವಾಹನ ಮೂಲಕ ವಿಸರ್ಜನೆಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು.

11.ಪಾಲಿಕೆಯ ವ್ಯಾಪ್ತಿಯ ಕೆರೆ/ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಯಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು ಸದರಿ ಸ್ಥಳಗಳ ಸಮೀಪದಲ್ಲಿ ತಾತ್ಕಾಲಿಕ ವಿಸರ್ಜನೆ ಸ್ಥಳಗಳನ್ನು ನಿರ್ಮಿಸಬೇಕು. ಸದರಿ ವಿಸರ್ಜನೆಯಿಂದ ಬರುವ ಮಣ್ಣು, ಪೂಜಾ ಹೂಗಳು ಹಾಗೂ ಪ್ಲಾಸ್ಟಿಕ್ ಇತ್ಯಾದಿ ವಸ್ತುಗಳನ್ನು ವಿಂಗಡಿಸಬೇಕು. ಹಸಿತ್ಯಾಜ್ಯವನ್ನು ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ, ಒಣತ್ಯಾಜ್ಯವನ್ನು ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿಗೆ ರವಾನಿಸಬೇಕು. ವಿಸರ್ಜನಾ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಮೂರ್ತಿಗಳನ್ನು ವಿಸರ್ಜಿಸಲು ಪ್ರತ್ಯೇಕ ತಂಡಗಳನ್ನು ನೇಮಿಸಬೇಕು ಹಾಗೂ ಕಿಯಾಸ್, ಆಂಬ್ಯುಲೆನ್ಸ್ ವ್ಯವಸ್ಥೆ, ವೈದ್ಯರು ಮತ್ತು ಶುಶ್ರೂಷಕಿಯರನ್ನು ಪ್ರಾಥಮಿಕ ಚಿಕಿತ್ಸೆ ನೀಡಲು ನೇಮಿಸಿ, ಎಲ್ಲಾ ಪಿಹೆಚ್‌ಸಿಗಳ ಬಳಿಯಲ್ಲಿ ಹೆಚ್ಚುವರಿ ಆಂಬ್ಯುಲೆನ್ಸ್ ಹಾಗೂ ವೈದ್ಯರು ಸಿದ್ಧವಿರುವಂತೆ ಕ್ರಮವಹಿಸಬೇಕು. ಬೆಳಕಿನ ವ್ಯವಸ್ಥೆ, ಬ್ಯಾರಿಕೇಡ್ ನಿರ್ಮಾಣ, ಧ್ವನಿವರ್ಧಕ ವ್ಯವಸ್ಥೆ ಮತ್ತು ನುರಿತ ಈಜುಗಾರರನ್ನು ಒಳಗೊಂಡಂತೆ ಎನ್‌ಡಿಆರ್‌ಎಫ್ ತಂಡ ಸ್ಥಳದಲ್ಲಿ ಹಾಜರಿರುವಂತೆ ಕ್ರಮವಹಿಸಬೇಕು.

12.ಪರಿಸರ ಸ್ನೇಹಿ ಗಣೇಶ ಆಚರಣೆಯ ನಿಮಿತ್ತ ವಲಯ ಆಯುಕ್ತರು ವಲಯಕ್ಕೆ ಒಬ್ಬರನ್ನು ಮೇಲುಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಿ, ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ವಾರ್ಡಿಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೇಮಿಸಲು ಅಗತ್ಯ ಕ್ರಮವಹಿಸಬೇಕು.

13.ಪ್ಲಾಸ್ಟಿಕ್ ನಿಷೇಧ ಆದೇಶ ಜಾರಿಯಲ್ಲಿದ್ದು, ವಲಯ ವ್ಯಾಪ್ತಿಯಲ್ಲಿ ತಂಡಗಳನ್ನು ರಚಿಸಿ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಕಂಡುಬಂದಲ್ಲಿ ನಿಯಮಾನುಸಾರ ದಂಡ ವಿಧಿಸಿ ಕ್ರಮಕೈಗೊಳ್ಳಬೇಕು.

14.ಪರಿಸರ ಸ್ನೇಹಿ ಗಣೇಶ ಆಚರಣೆಗೆ ಪ್ರೋತ್ಸಾಹ ನೀಡುಬೇಕು ಹಾಗೂ ಬಿಬಿಎಂಪಿ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಬೆಸ್ಕಾಂ ಹಾಗೂ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹೊರಡಿಸುವ ಷರತ್ತುಗೊಳಪಡಿಸಿ, ಗಣೇಶ ಹಬ್ಬ ಆಚರಣೆಗೆ ಅನುಮತಿ ನೀಡಲು ಕ್ರಮವಹಿಸಬೇಕು.


Spread the love

LEAVE A REPLY

Please enter your comment!
Please enter your name here