ದಾವಣಗೆರೆ:- ಜಿಲ್ಲೆಯ ಹರಿಹರ ತಾಲ್ಲೂಕಿನ ಎರೇ ಹೊಸಹಳ್ಳಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸುಮಾರು 300 ಎಕರೆ ಪ್ರದೇಶದಲ್ಲಿ ಬೆಳೆದ ಬೆಳ್ಳುಳ್ಳಿ ನಾಶವಾಗಿದ್ದು, ರೈತರು ಕಂಗಲಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಇಲ್ಲಿನ ರೈತರು ಇದನ್ನೇ ಪ್ರಮುಖ ಬೆಳೆಯನ್ನಾಗಿ ಬೆಳೆದು ಜೀವನ ನಡೆಸುತ್ತಿದ್ದಾರೆ. ಪ್ರತಿ ಬೆಳೆಗೆ ಲಕ್ಷಾಂತರ ರೂಪಾಯಿ ಪಡೆಯಬಹುದು ಎನ್ನುವ ನಿರೀಕ್ಷೆ ಯನ್ನು ಇಟ್ಟುಕೊಂಡು ಕೃಷಿ ಮಾಡುತ್ತಿದ್ದಾರೆ. ಆದರೆ ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ತುಂತುರು ಮಳೆಯಾಗುತ್ತಿದ್ದು, ಇದರಿಂದ ಬೆಳ್ಳುಳ್ಳಿ ಬೆಳೆ ಜಮೀನಿನಲ್ಲಿಯೇ ಕೊಳೆತು ಹೋಗುತ್ತಿದೆ. ಈಗಾಗಲೇ ಬೆಳ್ಳುಳ್ಳಿಯನ್ನು ಕಿತ್ತು ಒಣಗಿಸಿ ಮಾರುಕಟ್ಟೆಗೆ ಕಳುಹಿಸಬೇಕಿತ್ತು. ಆದರೆ ಮಳೆ ನಿರಂತರವಾಗಿ ಸುರಿಯುತ್ತಿರುವ ಪರಿಣಾಮ ಕೈಗೆಬಂದಿರುವ ಬೆಳ್ಳುಳ್ಳಿ ಬೆಳೆ ಬಾಯಿಗೆ ಬಾರದಂತಾಗಿದೆ.
ಬೆಳ್ಳುಳ್ಳಿ ಬೆಳೆಗೆ ಎಕರೆಗೆ 30 ರಿಂದ 40 ಸಾವಿರ ಖರ್ಚು ಮಾಡಿದ್ದು, ಖರ್ಚು ಮಾಡಿದ್ದ ಹಣದಲ್ಲಿ ಶೇ 10 ಆದರೂ ಸಿಗಲಿ ಎಂದು ರೈತರು ಇರುವ ಬೆಳೆಯನ್ನು ಕಿತ್ತು ಒಣಗಿಸಲು ಮುಂದಾಗಿದ್ದಾರೆ. ಹೀಗಾಗಿ ಸರ್ಕಾರ ಬೆಳೆಹಾನಿ ಸಮೀಕ್ಷೆ ನಡೆಸಿ, ಕನಿಷ್ಠ ಬೆಲೆಯನ್ನು ನೀಡಿ ಪರಿಹಾರ ಒದಗಿಸುವ ಮೂಲಕ ರೈತರು ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.