ನವದೆಹಲಿ:- ಮಂಡ್ಯ ಸಂಸದ ಹೆಚ್‌ಡಿ ಕುಮಾರಸ್ವಾಮಿ ಅವರು ಇಂದು ಕೇಂದ್ರದ ಹೆದ್ದಾರಿ ಮತ್ತು ಭೂಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಗಡ್ಕರಿ ಅವರ ದೆಹಲಿ ನಿವಾಸಕ್ಕೆ ತಮ್ಮ ಆಪ್ತ ಅಧಿಕಾರಿಗಳ ಜೊತೆ ತೆರಳಿ ಭೇಟಿ ಮಾಡಿದ ಕುಮಾರಸ್ವಾಮಿ ಅವರು, ಮಂಡ್ಯ ಲೋಕಸಭೆ ಕ್ಷೇತ್ರದ ಹಾಲಿ ಹಾಗೂ ಮುಂದೆ ಕೈಗೊಳ್ಳಲಿರುವ ಹೆದ್ದಾರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಈಗಾಗಲೇ ಹಲವಾರು ಯೋಜನೆಗಳ ಬಗ್ಗೆ ಮನವಿ ಮಾಡಿದ್ದು, ಬಹುತೇಕ ಯೋಜನೆಗಳಿಗೆ ಹೆದ್ದಾರಿ ಸಚಿವರಿಂದ ಅನುಮೋದನೆ ದೊರೆತಿದೆ. ಉಳಿದ ಕೆಲವು ಯೋಜನೆಗಳ ಬಗ್ಗೆ ಸಚಿವರು ಹೆದ್ದಾರಿ ಸಚಿವರೊಂದಿಗೆ ಚರ್ಚಿಸಿದರು.
ಇದೇ ವೇಳೆ ಪಾಂಡವಪುರ ಸಕ್ಕರೆ ಕಾರ್ಖಾನೆ ಸಮೀಪದ ಸಿಡಿಎಸ್ ಕಾಲುವೆಯಿಂದ ದಸರಗುಪ್ಪೆ ನೀರು ಸಂಸ್ಕರಣ ಘಟಕದವರೆಗೂ ನಾಲ್ಕು ಪಥದ ಹೆದ್ದಾರಿಯ ಅಭಿವೃದ್ಧಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನಕ್ಕೆ ನಿತಿನ್ ಗಡ್ಕರಿ ಅವರು ಅನುಮೋದನೆ ನೀಡಿದರು.