ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕ ಮಹಾಸಭಾದಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶಿರಹಟ್ಟಿ ಪಟ್ಟಣದ ಫಕೀರೇಶ್ವರ ಮಠದಿಂದ ಬೃಹತ್ ಪ್ರತಿಭಟನಾ ರ‍್ಯಾಲಿಯೊಂದಿಗೆ ಜಿಲ್ಲಾಡಳಿತ ಕಛೇರಿ ತಲುಪಿ, ನಡೆಸುತ್ತಿರುವ ಅಹೋರಾತ್ರಿ ಧರಣಿ 3ನೇ ದಿನಕ್ಕೆ ಮುಂದುವರೆದಿದೆ.
ಧರಣಿಯನ್ನುದ್ದೇಶಿಸಿ ಮಾತನಾಡಿದ ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ಜಿಲ್ಲೆಯ ಉಸ್ತುವಾರಿ ಸಚಿವರು ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಈಡೇರಿಸುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ರೈತರು ತಲೆತಲಾಂತರದಿಂದ ತಮ್ಮ ಉಪಜೀವನಕ್ಕಾಗಿ ಅರಣ್ಯ ಜಮೀನುಗಳನ್ನು ಸಾಗುವಳಿ ಮಾಡುತ್ತಾ ಬಂದಿದ್ದು, ಕಪ್ಪತ್ತಗುಡ್ಡ ರಕ್ಷಣೆ ಮಾಡಿದ ಬಗರಹುಕುಂ ಸಾಗುವಳಿದಾರರಿಗೆ ಹಾಗೂ ಅರಣ್ಯ ಅವಲಂಬಿತರಿಗೆ ಸರ್ಕಾರ ಹಕ್ಕುಪತ್ರ ನೀಡದೇ ವಿನಾಕಾರಣ ಕಿರುಕುಳ ಹಾಗೂ ದೌರ್ಜನ್ಯ ನೀಡುತ್ತಿದೆ ಎಂದರು.
ನಾಗಾವಿ ಗ್ರಾಮದಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ನಿರ್ಮಾಣಕ್ಕೆ ಜಮೀನುಗಳನ್ನು ನೀಡಿದ ನೂರಾರು ಕುಟುಂಬಗಳಿಗೆ ಪರಿಹಾರ ನೀಡದೆ ಒಕ್ಕಲೆಬ್ಬಿಸಿರುವುದು ಖಂಡನೀಯ. ಈ ಕೂಡಲೇ ಜಿಲ್ಲಾಡಳಿತ ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಇಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮಾತನಾಡುತ್ತಾ, ಉತ್ತರ ಕರ್ನಾಟಕ ಮಹಾಸಭಾದಿಂದ ಹಮ್ಮಿಕೊಂಡ ಈ ಅಹೋರಾತ್ರಿ ಧರಣಿಗೆ ನಮ್ಮ ಸಂಪರ್ಣ ಬೆಂಬಲವಿದೆ. ರೈತರ ಬೇಡಿಕೆಗಳು ನ್ಯಾಯಯುತವಾಗಿವೆ. ಈ ಕೂಡಲೇ ಬಗರ್ ಹುಕುಂ, ಅರಣ್ಯ ಅವಲಂಬಿತರ ಮತ್ತು ನಾಗಾವಿ ವಿಶ್ವವಿದ್ಯಾಲಯಕ್ಕೆ ಭೂಮಿಯನ್ನು ಕಳೆದುಕೊಂಡ ರೈತರ ಬೇಡಿಕೆಗಳನ್ನು ಇಡೇರಿಸಲು ಒತ್ತಾಯಿಸಿದರು.
ತಾ.ಪಂ ಮಾಜಿ ಅಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ಅಕ್ರಮ ಜಮೀನುಗಳನ್ನು ಸಕ್ರಮಗೊಳಿಸಿ ರೈತರ ಬದುಕನ್ನು ಹಸನು ಮಾಡುವ ನಿರ್ಧಾರವನ್ನು ರಾಜಕಾರಣಿಗಳು ಕೈಗೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಈ ರೈತರ ಹಿತಕ್ಕಾಗಿ, ಈ ಹೋರಾಟ ಮುಂದುವರಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಪೀರು ರಾಠೋಡ, ರಮೇಶ ಸಜ್ಜಗಾರ, ಪರಮೇಶ ಲಮಾಣಿ, ಎನ್.ಟಿ ಪೂಜಾರ, ಪಾಂಡು ಚವ್ಹಾಣ, ಜಿಲ್ಲೆಯ ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.
ಇದು ಮಾಡು ಇಲ್ಲವೇ ಮಡಿ ಹೋರಾಟವಾಗಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಹಿಂದೆ ಮಾತು ಕೊಟ್ಟಂತೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬರುವವರೆಗೂ ನಮ್ಮ ಧರಣಿ ಮುಂದುವರೆಯುತ್ತದೆ. ನಮ್ಮ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತದೆ. ಒಂದು ವೇಳೆ ಈ ಹೋರಾಟದಲ್ಲಿ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರೇ ನೇರ ಹೊಣೆಗಾರರಾಗುತ್ತಾರೆ.
– ರವಿಕಾಂತ ಅಂಗಡಿ,
ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷರು.