ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ತಹಸೀಲ್ದಾರ ಕಚೇರಿಗೆ ಗುರುವಾರ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರಿಗೆ ವಿವಿಧ ರೈತ ಸಂಘಟನೆಗಳ ನೂರಾರು ರೈತರು ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಇತ್ತೀಚೆಗೆ ಸತತವಾಗಿ ಸುರಿದ ಭಾರೀ ಮಳೆಯಿಂದ ಪ್ರಮುಖ ಬೆಳೆಗಳಾದ ಈರುಳ್ಳಿ, ಹೆಸರು, ಹತ್ತಿ, ಶೇಂಗಾ, ಗೋವಿನಜೋಳ, ಅಲಸಂದಿ ಸೋಯಾಬಿನ್, ಸೇವಂತಿ, ಚೆಂಡು ಹೂವು ಸೇರಿದಂತೆ ಬಹುತೇಕ ಬೆಳೆಗಳು ಕೊಳೆತು ಹಾಳಾಗಿವೆ. ಬಡ ರೈತರು ಸಾಲ-ಸೋಲ ಮಾಡಿ ಎಕರೆಗೆ 25ರಿಂದ 30 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಆದರೆ ಅತಿಯಾದ ಮಳೆಯಿಂದ ಫಸಲು ಕೈಗೆ ಸಿಗದೆ ರೈತ ಸಮೂಹ ಕಂಗಾಲಾಗಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬೆಳೆ ವಿಮೆ, ಹಾಳಾದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು. ಜಮೀನುಗಳಿಗೆ ಹೋಗುವ ತಾಲೂಕಿನ ರಸ್ತೆಗಳು ಮತ್ತು ಲಕ್ಷ್ಮೇಶ್ವರ ಪಟ್ಟಣದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಇವುಗಳ ದುರಸ್ಥಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವದು. ತಾಲೂಕಿನ ಸಮಸ್ಯೆಗಳ ಬಗ್ಗೆ ತಹಸೀಲ್ದಾರರು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಧನಂಜಯ ಎಂ, ಭಾರತೀಯ ಕಿಸಾನ ಸಂಘದ ತಾಲೂಕಾಧ್ಯಕ್ಷ ಅಜೇಯ ಕರಿಗೌಡ್ರ, ಕಾರ್ಯದರ್ಶಿ ಲಕ್ಷ್ಮಣ ಲಮಾಣಿ, ಜಿಲ್ಲಾ ಪ್ರ.ಕಾರ್ಯದರ್ಶಿ ರಮೇಶ ಕೋಳಿವಾಡ, ಆದೇಶ ಹುಲಗೂರ, ಚಂದ್ರಗೌಡ್ರು ಕರೆಗೌಡ್ರು, ವಸಂತಗೌಡ್ರ ಕರೆಗೌಡ್ರು, ಮುತ್ತು ಅಜ್ಜಪ್ಪಶೆಟ್ಟರ, ರಮೇಶ, ಹುಲಕೋಟಿ ಮಂಜುನಾಥ ಹುಲಕೋಟಿ, ಬಸವರಾಜ ಮೂಲಿಮನಿ ಮುಂತಾದವರಿದ್ದರು.