ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಿದ್ಧವಾಗುತ್ತಿರುವ ಗಣೇಶ ಮೂರ್ತಿಗಳಿಗೆ ಅಂತಿಮ ರೂಪ ಕೊಡುವ ಕೆಲಸ ಒಂದೆಡೆ ನಡೆದಿದ್ದರೆ, ಈಗಾಗಲೇ ಸಿದ್ಧವಾಗಿರುವ ಗಣಪತಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.
ಕಳೆದ ಮೂರು ದಶಕಗಳಿಂದ ಗಣಪತಿಗಳ ತಯಾರಿಕೆಯಲ್ಲಿ ಸಿದ್ಧಹಸ್ತರಾಗಿರುವವರು ಸಮೀಪದ ಕೋಟುಮಚಗಿಯ ನಾಗಪ್ಪ ಬಡಿಗೇರ. ಅವರ ಕೈಯಲ್ಲಿ ಅರಳುವ ಸುಂದರ ಗಣಪತಿಗಳಿಗೆ ಜಿಲ್ಲೆಯಾದ್ಯಂತ ಬಲು ಬೇಡಿಕೆ ಇದೆ.
ಗಣೇಶ ಚತುರ್ಥಿಗೆ 3-4 ತಿಂಗಳುಗಳ ಮೊದಲೇ ಇವರು ಗಣಪತಿ ತಯಾರಿಗೆ ಸಿದ್ಧರಾಗುತ್ತಾರೆ. ಮಣ್ಣು ತರುವದರಿಂದ ಹಿಡಿದು, ಅದನ್ನು ಜರಡಿ ಹಿಡಿದು ಹದ ಮಾಡುವವರೆಗೂ ಅವರಿಗೆ ವಿಶ್ರಾಂತಿ ಎಂಬುದೇ ಇಲ್ಲ. ಮನೆಯಲ್ಲಿ ನಾಗಪ್ಪ, ತಮ್ಮ ಮಲ್ಲಪ್ಪ ಮತ್ತು ಮಗ ಓಂಕಾರ ಅಲ್ಲದೆ ಮನೆಯ ಹೆಣ್ಣು ಮಕ್ಕಳೂ ಸಹ ಈ ಕಾರ್ಯಕ್ಕೆ ಕೈಜೋಡಿಸುತ್ತಾರೆ. ಎಲ್ಲ ಮೂರ್ತಿಗಳೂ ಜೀವಕಳೆ ಮತ್ತು ದೈವಕಳೆಗಳಿಂದ ಸುಂದರವಾಗಿ ಕಂಗೊಳಿಸುವುದರಿAದ ಗದಗ ಜಿಲ್ಲೆಯಲ್ಲದೆ ಪಕ್ಕದ ಕೊಪ್ಪಳ ಜಿಲ್ಲೆಯಲ್ಲಿಯೂ ಇವರ ಗಣಪತಿಗಳು ಪ್ರಸಿದ್ಧಿ ಪಡೆದಿವೆ.
ಒಂದು ಕಾಲದಲ್ಲಿ ಬಹು ಬೇಡಿಕೆ ಹೊಂದಿದ್ದ ಪಿಒಪಿ ಗಣಪತಿಗಳತ್ತ ಒಂದಿಷ್ಟೂ ಗಮನ ಹರಿಸದ ನಾಗಪ್ಪ, ಅವುಗಳನ್ನೂ ಮೀರಿಸುವಂತೆ ಮಣ್ಣಿನಲ್ಲಿಯೇ ಗಣಪತಿಗಳನ್ನು ತಯಾರಿಸಿ ಎಲ್ಲರ ಮನ ಗೆದ್ದಿದ್ದಾರೆ. ನಾಗಪ್ಪ ಬಡಿಗೇರರಿಂದ ಸಿದ್ಧಗೊಂಡ ಗಣಪತಿ ಮೂರ್ತಿಗಳು ನರೇಗಲ್ಲ, ಕೋಡಿಕೊಪ್ಪ, ಕೋಚಲಾಪೂರ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಜಕ್ಕಲಿ, ರೋಣ ಸೇರಿದಂತೆ ಪಕ್ಕದ ಯಲಬುರ್ಗಾ ತಾಲೂಕಿನ ಬಿನ್ನಾಳ, ತೊಂಡಿಹಾಳ ಮುಂತಾದ ಕಡೆಗಳಲ್ಲಿಯೂ ಭಾರೀ ಬೇಡಿಕೆಯನ್ನು ಹೊಂದಿವೆ.
ಹುಬ್ಬಳ್ಳಿ ಹತ್ತಿರದ ಅಂಚಟಗೇರಿಯಿಂದ ಮಣ್ಣನ್ನು ತರುವ ನಮಗೆ ಪ್ರತಿ ವರ್ಷ ಮಣ್ಣಿನ ಬೆಲೆ ಮತ್ತು ಸಾರಿಗೆ ವೆಚ್ಚ ದುಬಾರಿಯಾಗುತ್ತಿದೆ. ತಯಾರಿಕಾ ವೆಚ್ಚವೂ ಏರುತ್ತಿದೆ. ಬಣ್ಣಗಳೂ ಸಹ ಈಗ ಮೊದಲಿಗಿಂತ ತುಟ್ಟಿಯಾಗಿರುವದರಿಂದ ಗಣಪನಿಗೆ ಬಣ್ಣ ಹಚ್ಚುವುದೂ ಕೂಡ ದುಬಾರಿ ಎನ್ನಿಸುತ್ತಿದೆ. ಆದರೂ ಕಳೆದ ಮೂರು ದಶಕಗಳಿಂದ ನಮ್ಮನ್ನು ನಂಬಿರುವ ಗ್ರಾಹಕರಿಗೆ ಯಾವುದೇ ತೊಂದರೆಯಾಗಬಾರದು ಎಂದು ನಾವು ಈ ಕಾರ್ಯವನ್ನು ಮುಂದುವರೆಸಿದ್ದೇವೆ.
-ನಾಗಪ್ಪ ಬಡಿಗೇರ.
ಕೋಟುಮಚಗಿ.