ಮಂಡ್ಯ:- ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಇತ್ತೀಚೆಗೆ ಚಿನ್ನದಂಗಡಿಯಲ್ಲಿ ಕಳ್ಳತನ ಮಾಡುವುದನ್ನು ನೋಡಿದ ಹೋಟೆಲ್ ಮಾಲೀಕನ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯ ಕಾಲಿಗೆ ಫೈರಿಂಗ್ ಮಾಡಿ ಘಟನೆ ಸಂಬಂಧ ಒಟ್ಟು 5 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರನ್ನು ಕಿರಣ್, ಆನಂದ್, ಶರತ್, ಶ್ರೀನಿವಾಸ್, ಕೃಷ್ಣಾಚಾರಿ ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಕಿರಣ್‌ನನ್ನು ಮಂಡ್ಯದ ಮಳವಳ್ಳಿ ತಾಲೂಕಿನ ಭೀಮನಹಳ್ಳಿ ಬಳಿ ಬಂಧಿಸುವ ವೇಳೆ ಪೊಲೀಸ್ ಪೇದೆಯ ಮೇಲೆ ಆತ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ಪ್ರಾಣ ರಕ್ಷಣೆಗಾಗಿ ಹಲಗೂರು ಠಾಣೆ ಸಿಪಿಐ ಶ್ರೀಧರ್ ಅವರು ಆರೋಪಿ ಕಾಲಿಗೆ ಫೈರಿಂಗ್ ಮಾಡಿದ್ದಾರೆ.
ಘಟನೆ ವಿವರ:-
ಕಿರುಗಾವಲು ಗ್ರಾಮದ ಮಹಾಲಕ್ಷ್ಮಿ ಜ್ಯುವೆಲರಿ ಶಾಪ್‌ಗೆ ಆ.17ರಂದು ಖದೀಮರು ಕನ್ನ ಹಾಕಿದ್ದರು. ಬೆಳಗಿನ ಜಾವ 3ಗಂಟೆ ಸಮಯದಲ್ಲಿ ಗ್ಯಾಸ್ ಕಟರ್‌ನಿಂದ ಶಾಪ್ ಶೆಟರ್ ಮುರಿದು ಕಳ್ಳತನ ಮಾಡಿದ್ದರು. 110ಗ್ರಾಂ ಚಿನ್ನ, 2 ಕೆಜಿಯಷ್ಟು ಬೆಳ್ಳಿಯನ್ನು ಐವರು ಖದೀಮರ ತಂಡ ದೋಚಿತ್ತು. ಕಳ್ಳತನ ಮಾಡುವುದನ್ನ ನೋಡಿದ ಪಕ್ಕದ ಹೋಟೆಲ್‌ನ ಮಾಲೀಕ ಮಾದಪ್ಪ ಅವರನ್ನು ಖದೀಮರು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಆರೋಪಿ ಆನಂದ್ ಕೇರಳದಲ್ಲೂ ವಾಹನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.