ನವದೆಹಲಿ: ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಬಗ್ಗೆ ಚರ್ಚೆ ಆರಂಭವಾಗಿತ್ತು. ದೆಹಲಿ ಜನವಸತಿ ಪ್ರದೇಶದಲ್ಲಿರುವ ಬೀದಿ ನಾಯಿಗಳನ್ನು ತೆರವುಗೊಳಿಸಿ ಪ್ರತ್ಯೇಕ ಆಶ್ರಯ ತಾಣಗಳಲ್ಲಿ ಇರಿಸುವಂತೆ ಆಗಸ್ಟ್ 11ರಂದು ಸುಪ್ರೀಂ ನಿರ್ದೇಶಿಸಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಾದ – ಪ್ರತಿವಾದ ಕೇಳಿಬಂದಿತ್ತು.
ಇದೀಗ ಆದೇಶವನ್ನು ಸುಪ್ರೀಂ ಕೋರ್ಟ್ ಮಾರ್ಪಾಡು ಮಾಡಿದೆ. ರೇಬೀಸ್ ಸೋಂಕಿಗೆ ಒಳಗಾದ ಅಥವಾ ಆಕ್ರಮಣಕಾರಿ ನಡವಳಿಕೆಯನ್ನು ಹೊಂದಿರುವ ನಾಯಿಗಳನ್ನು ಹೊರತುಪಡಿಸಿ, ಹಿಡಿದಿರುವ ನಾಯಿಗಳನ್ನು ಕ್ರಿಮಿನಾಶಕ ಮತ್ತು ಲಸಿಕೆ ಹಾಕಿದ ನಂತರವೇ ರಸ್ತೆಗೆ ಬಿಡಬೇಕು ಎಂದು ನ್ಯಾಯಾಲಯ ಹೇಳಿದೆ.
ಮುನ್ಸಿಪಲ್ ಕಾರ್ಪೊರೇಷನ್ ಆದೇಶದ ಸೆಕ್ಷನ್ 12, 12.1 ಮತ್ತು 12.2 ಅನ್ನು ಪಾಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಜಂತುಹುಳು ನಿವಾರಣೆ, ಲಸಿಕೆ ಇತ್ಯಾದಿಗಳನ್ನು ಹಾಕಿದ ನಂತರ ಹಿಡಿದಿರುವ ನಾಯಿಗಳನ್ನು ಅದೇ ಪ್ರದೇಶದಲ್ಲಿ ಬಿಡಬೇಕು. ಆದರೆ ಆಕ್ರಮಣಕಾರಿ ಅಥವಾ ರೇಬೀಸ್ ಸೋಂಕಿತ ನಾಯಿಗಳನ್ನು ಯಾವುದೇ ಕಾರಣಕ್ಕೂ ಮತ್ತೆ ಬಿಡಬಾರದು.
ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ನೀಡುವುದನ್ನು ನಿಷೇಧಿಸಲಾಗುವುದು ಎಂದು ನ್ಯಾಯಮೂರ್ತಿ ನಾಥ್ ಹೇಳಿದರು. ಇದಕ್ಕಾಗಿ ಪ್ರತ್ಯೇಕ ಮೀಸಲಾದ ಆಹಾರ ವಲಯಗಳನ್ನು ರಚಿಸಬೇಕು. ಆಹಾರ ನೀಡದ ಕಾರಣ ಅನೇಕ ಘಟನೆಗಳು ಸಂಭವಿಸಿವೆ ಎಂದು ಅವರು ಹೇಳಿದರು.