ತಿಂಗಳ ಪರ್ಯಂತ ಮಕ್ಕಳಿಗೆ ಸಿಹಿಯೂಟ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಪುಟಗಾವ್‌ಬಡ್ನಿ ಗ್ರಾಮದ ಸ.ಚ. ಹರದಗಟ್ಟಿ ಸರ್ಕಾರಿ ಪಬ್ಲಿಕ್ ಸ್ಕೂಲ್‌ನ ಮಕ್ಕಳಿಗೆ ಶ್ರಾವಣ ಮಾಸದಾದ್ಯಂತ ಸಿಹಿ ಭೋಜನವನ್ನು ಕಳೆದ ಅನೇಕ ವರ್ಷಗಳಿಂದ ಮಾಡಿಕೊಂಡು ಬಂದಿದ್ದು, ಅದರಂತೆ ಈ ವರ್ಷವು ಒಂದು ತಿಂಗಳ ಕಾಲ ಸಿಹಿ ಊಟ ನೀಡಲಾಗಿದ್ದು, ಶುಕ್ರವಾರ ನೂರಾರು ಮಕ್ಕಳಿಗೆ ಕಡುಬಿನ ಊಟ ಉಣಬಡಿಸಲಾಯಿತು.

Advertisement

ನಾಡಿನ ಹಬ್ಬಗಳು ಮತ್ತು ಅವುಗಳ ಆಚರಣೆ, ವೈಶಿಷ್ಟ್ಯದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಸಲುವಾಗಿ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರ ದೂರದೃಷ್ಟಿಯ ಫಲವಾಗಿ ಮಕ್ಕಳಿಗೆ ಒಂದು ತಿಂಗಳ ಪರ್ಯಂತ ಮಧ್ಯಾಹ್ನದ ಬಿಸಿಯೂಟದೊಂದಿಗೆ ಸಿಹಿ ಬಡಿಸುವುದು ವಿಶೇಷವಾಗಿದೆ. ಮುಂಜಾನೆಯಿಂದಲೇ ಸಾವಿರಾರು ಕಡುಬುಗಳನ್ನು ತಯಾರಿಸಿದ್ದು, ಅತಿಥಿಗಳು ಮತ್ತು ನೂರಾರು ಮಕ್ಕಳು ಕಡುಬುಗಳನ್ನು ಸವಿದರು.

ನಾಗರ ಅಮವಾಸ್ಯೆಯಿಂದ ಬೆನಕನ ಅಮವಾಸ್ಯೆಯವರೆಗೆ ಶಾಲೆಯ ಮಕ್ಕಳಿಗೆ ಪ್ರತಿ ದಿನ ಮಧ್ಯಾಹ್ನ ಬಿಸಿ ಊಟದಲ್ಲಿ ನೀಡುವ ಸಿಹಿ ಊಟಕ್ಕೆ ಶಿಕ್ಷಕರು ಅಮೃತ ಭೋಜನ ಎಂದು ನಾಮಕರಣ ಮಾಡಿದ್ದಾರೆ. ಶಾಲಾ ಮಕ್ಕಳಲ್ಲಿ ನಮ್ಮ ಹಬ್ಬ, ಆಚರಣೆ, ಪರಂಪರೆಗಳ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಪುಟಗಾವ್‌ಬಡ್ನಿ ಗ್ರಾಮದ ಪಬ್ಲಿಕ್ ಸ್ಕೂಲ್‌ನ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರ ಸಹಕಾರದಿಂದ ತಿಂಗಳವರೆಗೆ ವಿವಿಧ ತೆರನಾದ ಸಿಹಿ ಖಾದ್ಯಗಳನ್ನು ಮಕ್ಕಳಿಗೆ ಉಣ ಬಡಿಸಿದ್ದು ವಿಶೇಷ ಎಂದು ಪಿಡಿಒ ಬಸವರಾಜ ಬಳೂಟಗಿ ತಿಳಿಸಿದರು.

2022-23ರಿಂದ ಶ್ರಾವಣ ಮಾಸದಲ್ಲಿ ಮಕ್ಕಳಿಗೆ ಸಿಹಿ ವಿತರಣೆಯ ನೂತನ ಕಾರ್ಯಕ್ರಮವನ್ನು ಆಗಿನ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಬಿ. ಹೊಸಮನಿ ಶಿಕ್ಷಣ ಪ್ರೇಮಿಗಳ ಸಹಕಾರದೊಂದಿಗೆ ಆರಂಭಿಸಿದ್ದರು. ಅದನ್ನೇ ಈಗಲೂ ಮುಂದುವರೆಸಿಕೊಂಡು ಬರುತ್ತಿದ್ದೇವೆ ಎಂದು ಮುಖ್ಯ ಶಿಕ್ಷಕಿ ಜಯಶ್ರೀ ಹೊಸಮನಿ ಹೇಳಿದರು. ಈ ಸಂದರ್ಭದಲ್ಲಿ ಶಿವಾನಂದ ಹರಿಜನ, ಶಿವಪುತ್ರಪ್ಪ ಜಿಡ್ಡಿ, ಶ್ರೀಕಾಂತ ಚೋಟಗಲ್ಲ, ಶಿಕ್ಷಕರು ಇದ್ದರು.


Spread the love

LEAVE A REPLY

Please enter your comment!
Please enter your name here