ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರಾವಣ ಮಾಸದ ಪುಣ್ಯ ಕಾಲದಲ್ಲಿ ಸಂತರು, ಶರಣರು, ಮಹಾತ್ಮರು ತಿಳಿಸಿದ ಜೀವನ ಮೌಲ್ಯಗಳು, ಆದರ್ಶ ಚಿಂತನೆಗಳನ್ನು ಕೇಳುವುದರಿಂದ ಮನಸ್ಸಿನ ದುರ್ಗುಣಗಳು ಕಳೆದು ಸದ್ವಿಚಾರ, ಸದ್ಗುಣಗಳನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ, ಶರಣ ಚಿಂತಕರಾದ ಡಿ.ಆರ್. ಪಾಟೀಲ ಹೇಳಿದರು.
ಅವರು ಬುಧವಾರ ಪಟ್ಟಣದ ಶ್ರೀ ಸೋಮೇಶ್ವರ ಪುರಾಣ ಸೇವಾ ಸಮಿತಿಯಿಂದ ಹಮ್ಮಿಕೊಂಡಿರುವ ಶ್ರೀ ಸಿದ್ಧಾರೂಡ ಕಥಾಮೃತ ಪುರಾಣ ಪ್ರವಚನದಲ್ಲಿ ಮಾತನಾಡಿ, ಟಿವಿ, ಮೊಬೈಲ್ ತಂತ್ರಜ್ಞಾನದ ದುನಿಯಾದಲ್ಲಿ ಪುರಾಣ, ಪುಣ್ಯಕಥೆ, ಧಾರ್ಮಿಕ ಆಚರಣೆ, ಸಂಪ್ರದಾಯ ಮರೆಯುತ್ತಿರುವುದು ದುರ್ದೈವದ ಸಂಗತಿ. ಬದುಕಿನ ಜಂಜಾಟದ ನಡುವೆ ಧರ್ಮಕಾರ್ಯ, ಸತ್ಸಂಗ, ಪುರಾಣ-ಪುಣ್ಯಕಥೆ ಆಲಿಸುವುದರಿಂದ ಸಾರ್ಥಕ ಬದುಕಿನ ಮಾರ್ಗ ತೆರೆದುಕೊಳ್ಳುತ್ತದೆ. ಜೀವನದುದ್ದಕ್ಕೂ ಧರ್ಮ, ಪರಂಪರೆ, ಸಂಸ್ಕೃತಿ, ಸಮನ್ವಯತೆ ಹೀಗೆ ಲೋಕಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು ಇಂದಿಗೂ ಎಂದೆಂದಿಗೂ ದಾರಿ ದೀಪವಾಗಿರುವವರು ಲಿಂ.ಶ್ರೀ ಸಿದ್ಧಾರೂಡ ಶರಣರು. ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಇಂತಹ ಸತ್ಪುರುಷರ ವಿಚಾರಗಳನ್ನು ಆಲಿಸುವುದು ಮತ್ತು ಅವರ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನ ಪಾವನವಾಗುತ್ತದೆ. ಕಳೆದ 13 ವರ್ಷಗಳಿಂದ ದೇವಸ್ಥಾನದಲ್ಲಿ ಪುರಾಣ ಪ್ರವಚನ ನಡೆಸುತ್ತಾ ಬರುತ್ತಿರುವ ಸಮಿತಿಯವರ ಕಾರ್ಯ ಅಭಿನಂದನಾರ್ಹವಾಗಿದೆ ಎಂದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ನ ಅಧ್ಯಕ್ಷ ಗುರಣ್ಣ ಪಾಟೀಲ ಕುಲಕರ್ಣಿ, ಚನ್ನಪ್ಪ ಜಗಲಿ, ಸುನೀಲ ಮಹಾಂತಶೆಟ್ಟರ, ಪ್ರವೀಣ ಬಾಳಿಕಾಯಿ, ವಿರೂಪಾಕ್ಷ ಆದಿ, ಮಯೂರ ಪಾಟೀಲ, ನಂದೀಶ ಬಂಡಿವಾಡ, ಸೋಮಶೇಖರ ಕೆರಿಮನಿ, ಜಿ.ಎಸ್. ಗುಡಗೇರಿ ಮುಂತಾದವರಿದ್ದರು.
ಡಾ.ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯ ಪಂ. ಗುರುಶಾಂತಯ್ಯ ಶಾಸ್ತಿç ಆರಾಧ್ಯಮಠ ಗವಾಯಿಗಳು ಪುರಾಣ ಪಠಣ-ಪ್ರವಚನಗೈದರೆ ವಿಜಯಕುಮಾರ ಸುತಾರ ತಬಲಾ ಸಾಥ್ ನೀಡಿದರು.


