
ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಸಮಾಜದಲ್ಲಿ ಶಾಂತಿಯನ್ನು ಕಾಪಾಡುವುದು ಸಮಾಜದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ತಿಳಿಸಿದರು.
ಅವರು ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ನಿಮಿತ್ತ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವರು ಮದ್ಯಪಾನ ಮಾಡಿ ಸಮಾಜದ ಸ್ವಾಸ್ಥ್ಯ ಹಾಳುಮಾಡುವ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದು, ಈ ರೀತಿ ಮಾಡಿದರೆ ಕ್ರಮ ಖಂಡಿತ. ಮೊಬೈಲ್ ಬಳಕೆಯು ನಮ್ಮ ನಿತ್ಯದ ಬದುಕಿನಲ್ಲಿ ಹಲವಾರು ಉಪಯುಕ್ತತೆಯನ್ನು ಪಡೆದುಕೊಳ್ಳಲು ಸಹಕಾರಿಯಾಗಬೇಕೆ ಹೊರತು, ಸಾಮಾಜಿಕ ಶಾಂತಿ ಕದಡುವ ಕೆಲಸವಾಗಬಾರದು ಎಂದರು.
ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾತನಾಡಿ, ಸರ್ಕಾರದ ಅಧಿನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಗಣೇಶ ಪ್ರತಿಷ್ಠಾಪನೆ ಮಾಡುವ ಸಮಿತಿಯವರು ಕಡ್ಡಾಯವಾಗಿ 4 ಜನ ಸ್ವಯಂ ಸೇವಕರನ್ನು ನಿಯೋಜನೆಗೊಳಿಸಬೇಕು ಮತ್ತು ಪ್ರತಿಷ್ಠಾಪನೆಗೂ ಮುನ್ನ ಗ್ರಾಮೀಣ ಪ್ರದೆಶಗಳಲ್ಲಿ ಗ್ರಾಮ ಪಂಚಾಯಿತಿಯ ವತಿಯಿಂದ, ಪಟ್ಟಣದವರು ಪುರಸಭೆ ಮುಖ್ಯಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದರು.
ತಹಶೀಲ್ದಾರ ಬಿ.ವಿ. ಗಿರೀಶಬಾಬು ಮಾತನಾಡಿ, ನಮ್ಮ ಸಂಸ್ಕಾರ, ಸಂಸ್ಕೃತಿ ಉಳಿಸಿಕೊಂಡು ಹಬ್ಬ ಆಚರಿಸಬೇಕು. ಯಾವುದೇ ಅಹಿತಕರ ಘಟನೆಯಾಗದಂತೆ ಹಬ್ಬ ಆಚರಿಸಿ ಎಂದು ಹೇಳಿದರು.
ತಾ.ಪಂ ಇಒ ಚಂದ್ರಶೇಖರ ಮಾತನಾಡಿ, ಗ್ರಾಮ ಪಂಚಾಯಿತಿಗೆ ತೆರಿಗೆ ಪಾವತಿಸಿ ನಿಗದಿತ ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್, ಪ್ಲೆಕ್ಸ್ ಅಳವಡಿಸಿ ಎಂದು ಸಲಹೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ ಮಾತನಾಡಿ, ಷರತ್ತಿಗೆ ಒಳಪಡಿಸಿ ಗಣೇಶ ಮೂರ್ತಿ ಸ್ಥಾಪನೆಗೆ ಅನುಮತಿ ನೀಡುತ್ತೇವೆ. ಹಬ್ಬಗಳನ್ನು ಶಾಂತಿಯಿಂದ ಆಚರಿಸಿ ಎಂದರು.
ವಿಶ್ವ ಹಿಂದೂ ಪರಿಷತ್ತು ಮುಖಂಡ ಎಚ್.ಎಂ.ಜಗದೀಶ ಮಾತನಾಡಿ, ಪಟ್ಟಣದಲ್ಲಿ ವಿಎಚ್ಪಿ, ಬಜರಂಗದಳದ ವತಿಯಿಂದ 11 ದಿವಸ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ. ಹೊಸಪೇಟೆ ರಸ್ತೆಯಲ್ಲಿ ಲೈಟಿಂಗ್ ಹಾಕಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಕೋರಿದರು.
ಅರಸೀಕೆರೆ ಸಲಾಂ ಸಾಹೇಬ್ ಮಾತನಾಡಿ, ಅನ್ಯ ಧರ್ಮೀಯರನ್ನು ಗೌರವಿಸಿದರೆ ನಮ್ಮ ಧರ್ಮಕ್ಕೆ ಗೌರವ ಬರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ವರ್ಗದವರೂ ಒಂದೇ. ನಾವೆಲ್ಲರೂ ಒಗ್ಗಟ್ಟಿನಿಂದ ಶಾಂತಿ, ಸಂಭ್ರಮದಿಂದ ಹಬ್ಬಗಳನ್ನು ಆಚರಿಸಿ ಸಮಾಜಕ್ಕೆ ಉತ್ತಮ ಸಂದೇಶ ಕೊಡೋಣ ಎಂದು ನುಡಿದರು.
ಅಂಜುಮನ್ ಮಾಜಿ ಅಧ್ಯಕ್ಷ ಎಂ.ಜಾವೇದ್, ಕುಂಚೂರು ಇಬ್ರಾಹಿಂ ಮಾತನಾಡಿದರು. ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್ಐಗಳಾದ ಶಂಭುಲಿಂಗ ಹಿರೇಮಠ, ಕಿರಣ್ ಕುಮಾರ, ವಿಜಯಕೃಷ್ಣ, ನಾಗರತ್ನಮ್ಮ, ಅಗ್ನಿಶಾಮಕ ದಳದ ಅಧಿಕಾರಿ ನರಸಪ್ಪ ಉಪಸ್ಥಿತರಿದ್ದರು.
ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾತನಾಡಿ, ಫ್ಲೆಕ್ಸ್ ಹಾಕುವವರು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಮತ್ತು ಸುಲಭವಾಗಿ ಪತ್ತೆ ಹಚ್ಚಲು ತಾಲೂಕಿನಲ್ಲಿ ಒಟ್ಟಾರೆ 2190 ಸಿಸಿ ಟಿವಿ ಅಳವಡಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಗಣೇಶ ವಿಸರ್ಜನೆಯನ್ನು ರಾತ್ರಿ 10 ಗಂಟೆಯ ಒಳಗಡೆ ಮಾಡಬೇಕು, ದ್ವನಿವರ್ಧಕಗಳಿಗೆ ಅನುಮತಿ ಪಡೆಯಬೇಕು ಎಂದರು.