ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಅಗ್ನಿ ಅವಘಡಗಳ ನಿಯಂತ್ರಣಕ್ಕೆ ಜಾಗರೂಕತೆ ಮತ್ತು ಮುನ್ನೆಚ್ಚರಿಕೆ ಕ್ರಮ ಅತೀ ಅವಶ್ಯಕವೆಂದು ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ. ಮರಟಗೇರಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಬಿಸಿಎನ್ ಸ್ಪೆಕ್ಟ್ರಂ ಆಂಗ್ಲ ಮಾದ್ಯಮ ಶಾಲೆಯಲ್ಲಿ ಅಗ್ನಿಶಾಮಕ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಅಗ್ನಿ ಅವಘಡಗಳ ಕುರಿತ ಜಾಗೃತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಅವಘಡಗಳು ಆಕಸ್ಮಿಕ ಅಷ್ಟೇ ಅಲ್ಲದೇ ಅಜಾಗರೂಕತೆ, ನಿರ್ಲಕ್ಷ್ಯತನ ಮತ್ತು ಮುನ್ನೆಚ್ಚರಿಕೆಗಳ ಕೊರತೆಯಿಂದ ಘಟಿಸುತ್ತವೆ. ಅಗ್ನಿ ಅನಾಹುತದಿಂದ ಜೀವಹಾನಿ, ಆಸ್ತಿಹಾನಿ ಉಂಟಾಗಿ ಜೀವನ ಪರ್ಯಂತ ನೋವು ಅನುಭವಿಸಬೇಕಾಗುತ್ತದೆ.
ಮನೆ, ಶಾಲೆ, ದೇವಸ್ಥಾನ, ಹೋಟೆಲ್ ಇನ್ನಿತರ ಸ್ಥಳಗಳಲ್ಲಿ ಸಿಲಿಂಡರ್ ಬಳಸುವಾಗ ಜಾಗರೂಕತೆ, ಮುನ್ನೆಚ್ಚರಿಕೆ ಅನುಸರಿಸಬೇಕು. ಸಿಲಿಂಡರ್‌ನಲ್ಲಿ ಬೆಂಕಿ ಹೊತ್ತಿಕೊಂಡಾಗ ಮೊದಲು ಹೊರಗಡೆ ಸುರಕ್ಷಿತ ಜಾಗಕ್ಕೆ ತೆರಳಬೇಕು. ಗೋಣಿ ಚೀಲ, ದಪ್ಪನಾದ ಬೆಡ್‌ಶೀಟ್ ನೀರಿನಲ್ಲಿ ನೆನೆಸಿ ಬೆಂಕಿಗೆ ಆಮ್ಲಜನಕ ಪೂರೈಕೆ ಆಗದಂತೆ ಗಟ್ಟಿಯಾಗಿ ಹಾಕಬೇಕು. ವಿದ್ಯುತ್ ಅವಘಡಗಳಿಂದ ಬೆಂಕಿ ಹೊತ್ತಿದಲ್ಲಿ ತಕ್ಷಣ ತುರ್ತು ಅಗ್ನಿಶಾಮಕ ಠಾಣೆಗೆ ಕಡ್ಡಾಯವಾಗಿ ಮಾಹಿತಿ ರವಾನಿಸಬೇಕು. ನೀರು, ಗಾಳಿ ಹಾಗೂ ಬೆಂಕಿಯ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದೆ ಎಚ್ಚರಿಕೆ ಕಾಯ್ದುಕೊಳ್ಳಬೇಕು ಮತ್ತು ಈ ಬಗ್ಗೆ ಎಲ್ಲರಲ್ಲಿಯೂ ಸಾಮಾನ್ಯ ತಿಳುವಳಿಕೆ ಅಗತ್ಯ ಎಂದರು.
ಬೆಂಕಿ ನಂದಿಸುವ ಕುರಿತು ಕಲ್ಪಿತ ಪ್ರದರ್ಶನ ನೀಡಲಾಯಿತು. ಈ ವೇಳೆ ಅಗ್ನಿಶಾಮಕ ಸಿಬ್ಬಂದಿ ಆರ್.ಎಸ್. ಸನದಿ, ಹರೀಶ ಜಿ.ಡಿ, ಮಹೇಂದ್ರಗೌಡ ಪಾಟೀಲ, ಕಿರಣ ಕೆ.ಬಿ, ಶಾಲೆಯ ಆಡಳಿತಾಧಿಕಾರಿ ನಾಗರಾಜ ಯಂಡಿಗೇರಿ, ಪ್ರಾಚಾರ್ಯರು, ಶಿಕ್ಷಕರು, ವಿದ್ಯಾರ್ಥಿಗಳಿದ್ದರು.



