ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ತಿಮ್ಮಾಪೂರ ಗ್ರಾಮದ ಶ್ರೀ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಸ್ಟೇಟ್ ಲೀಡ್ ಬ್ಯಾಂಕ್, ಕೆನರಾ ಬ್ಯಾಂಕ್ ಬೆಂಗಳೂರು ಹಾಗೂ ಲೀಡ್ ಬ್ಯಾಂಕ್ ಗದಗ ಆರ್‌ಓ ಕೆನರಾ ಬ್ಯಾಂಕ್ ಬಾಗಲಕೋಟೆ ಹಾಗೂ ಕೆನರಾ ಬ್ಯಾಂಕ್ ಹರ್ಲಾಪೂರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಣಕಾಸಿನ ಆರ್ಥಿಕ ಸೇರ್ಪಡೆ ಕುರಿತು ಗ್ರಾಹಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಹನುಮವ್ವ ತಳವಾರ ಹಾಗೂ ಉಪಾಧ್ಯಕ್ಷ ಹುಚ್ಚೀರಪ್ಪ ಜೋಗಿನ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಸ್ಟೇಟ್ ಲೀಡ್ ಬ್ಯಾಂಕ್ ಬೆಂಗಳೂರು ಜನರಲ್ ಮ್ಯಾನೇಜರ್ ಭಾಸ್ಕರ್ ಚಕ್ರವರ್ತಿ ಮಾತನಾಡಿ, ಬ್ಯಾಂಕುಗಳು ಹಣಕಾಸು ವ್ಯವಹಾರ ಮಾಡುವುದರ ಜೊತೆಗೆ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ತನ್ನ ಅನೇಕ ಯೋಜನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸವನ್ನು ನಮ್ಮ ಮಾಡುತ್ತಿವೆ. ಎಲ್ಲಾ ಗ್ರಾಮದ ಬ್ಯಾಂಕ್ ಗ್ರಾಹಕರಿಗೆ ಹಣಕಾಸಿನ ಆರ್ಥಿಕ ಸೇರ್ಪಡೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಪ್ರಾರಂಭಿಸಿದ್ದು, ಈ ಅಭಿಯಾನ ಮೂರು ತಿಂಗಳ ಕಾಲ ನಿರಂತರವಾಗಿ ನಡೆಯಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಂತೋಷ ಕುಮಾರ ಮಾತನಾಡಿ, ಬ್ಯಾಂಕ್ ಸಾಲ ಸೌಲಭ್ಯಗಳನ್ನು ನಿಡುವದರ ಜೊತೆಗೆ ಬಡ ರೈತರಿಗೆ, ಕೂಲಿಕಾರರಿಗೆ, ಸಾಮಾನ್ಯ ವರ್ಗದ ಜನರಿಗೆ ಸರಕಾರ ಜಾರಿಗೆ ತಂದಿರುವ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುತ್ತಿದೆ ಎಂದರು.
ಹುಬ್ಬಳ್ಳಿ ಕೆನರಾ ಬ್ಯಾಂಕ್‌ನ ಜಗದೀಶ್ ಸ್ವಾಮಿ ಮಾತನಾಡಿ, 10 ವರ್ಷಗಳಿಗಿಂತ ಹಳೆಯ ಬ್ಯಾಂಕ್ ಖಾತೆಗಳನ್ನು ಇ-ಕೆವೈಸಿ ಮಾಡಿಸಿ ಬ್ಯಾಂಕ್ ಖಾತೆಗಳನ್ನು ಚಾಲ್ತಿ ಮಾಡಿಸಿ ಸರ್ಕಾರದಿಂದ ಬರುವ ಸಬ್ಸಿಡಿ ಸೌಲಭ್ಯ ಪಡೆಯಬಹುದು ಎಂದು ಹೇಳಿದರು.
ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಮಾತನಾಡಿ, ಬ್ಯಾಂಕುಗಳು ಗ್ರಾಹಕರ ಹಿತ ಕಾಪಾಡುವ ಕೆಲಸವನ್ನು ಮಾಡುತ್ತವೆ. ಬ್ಯಾಂಕಿನಲ್ಲಿ ಸಾಲ ಸೌಲಭ್ಯಗಳನ್ನು ಪಡೆಯಬೇಕು ಹಾಗೂ ಅತಿ ಕಡಿಮೆ ಬೆಲೆಗೆ ಸಿಗುವ ವಿಮಾ ಪಾಲಿಸಿ ಮಾಡಿಸಿ ಜೀವನವನ್ನು ಆರ್ಥಿಕವಾಗಿ ಭದ್ರಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಬಸವರಾಜ ಯಲಬುರ್ಗಿ, ಮೃಗನ್ ಸೌಂದರ್ಯ ರಾಜನ್, ಲಕ್ಕುಂಡಿ ಬ್ಯಾಂಕ್ ಮ್ಯಾನೇಜರ್ ಶ್ರೀಹರ್ಷಾ, ಹರ್ಲಾಪೂರ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ ಕೆ, ಹನುಮೇಶ ಗಂಗರಾವುತರ, ರಾಜು ಬಂಣಗಾರ, ಮಲ್ಲಿಕಾರ್ಜುನ ಬಂಣಗಾರ, ಸಿದ್ದು, ಸಚಿನ್, ಬ್ಯಾಂಕ್ ಮಿತ್ರರಾದ ರುದ್ರಗೌಡ ಗೌಡ್ರು, ಮಂಜುನಾಥ ಹರ್ತಿ, ಮಹಿಳಾ ಸಂಘದ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ವಿಮೆ ಯೋಜನೆ ಪಡೆದು ಅಪಘಾತದಲ್ಲಿ ಮೃತಪಟ್ಟ ಶ್ರೀಶೈಲ ಬುಡ್ನೆಕೇರಿ, ಶಾಂತವ್ವ ಗುಡ್ಲಾನೂರ ಕುಟುಂಬದ ನಾಮಿನಿದಾರರಿಗೆ ಬಾಗಲಕೋಟೆ ಕೆನರಾ ಬ್ಯಾಂಕ್ ರೀಜಿನಲ್ ಮ್ಯಾನೇಜರ್ ಡಿ.ಸಿ. ಸತ್ಯನ್ ತಲಾ 4 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದರು.