ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳು ಬಾಲ್ಯಾವಸ್ಥೆಯಲ್ಲಿಯೇ ಮಹತ್ವಾಕಾಂಕ್ಷೆಯ ಕನಸು ಕಾಣಬೇಕು. ಇದುವರೆಗೂ ಯಾರೂ ಮಾಡದಿರುವ ಸಾಧನೆಯನ್ನು ಮಾಡುವೆಡೆಗೆ ದೃಷ್ಟಿ ಹರಿಸಿ ತನ್ನ ಬಗೆಗೆ ಹಾಗೂ ತನ್ನ ವಿಚಾರಧಾರೆಗಳಲ್ಲಿ ನಂಬಿಕೆ ಇರಿಸಿ ಕನಸನ್ನು ಕಾಣಬೇಕು. ಕಂಡ ಕನಸು ಸಾಕಾರಗೊಳಿಸಲು ಭಗೀರಥ ಪ್ರಯತ್ನ ಇದ್ದಾಗ ಸಾಧನೆ ಸಾಧ್ಯ ಎಂದು ಚಿಂತಕ ಶರಣಪ್ಪ ಸಾಸನೂರ ಹೇಳಿದರು.
ಅವರು ಗದುಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 5ರಲ್ಲಿ ಗದಗ ಜಿಲ್ಲಾ ಶರಣೆ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ, ಅಮೃತ ಭೋಜನ ಮಾಲಿಕೆ-21ರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ನಾವು ಹುಟ್ಟಿನಿಂದಲೇ ಎಲ್ಲವನ್ನೂ ಪಡೆದಿರುವುದಿಲ್ಲ. ನಮ್ಮ ಪ್ರಯತ್ನ, ಆಲೋಚನೆ ಹಾಗೂ ದೃಢ ನಂಬಿಕೆಯಿಂದ ಸಫಲತೆ ಪಡೆಯುತ್ತೇವೆ. ಶೈಕ್ಷಣಿಕವಾಗಿ ಸಾಧನೆಗೈದು ಸಾಧಕರು ಎನ್ನಿಸಿಕೊಂಡಾಗ ಕುಟುಂಬ, ಸಮಾಜ, ದೇಶವೇ ಹೆಮ್ಮೆ ಪಡುವಂತೆ ಆಗುವದಲ್ಲದೆ ಶಹಬ್ಬಾಸ್ ಎಂದು ಎಲ್ಲರೂ ಎದೆ ತುಂಬಿ ಹೇಳುವರು. ಅದಕ್ಕಾಗಿ ಮಕ್ಕಳು ಉತ್ತಮ ಸಾಧನೆಯನ್ನು ಗುರಿಯಾಗಿಸಿಕೊಂಡು ಪರಿಶ್ರಮದಿಂದ ಪ್ರತಿಭಾನ್ವಿತರಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕವಿತಾ ಬೇಲೇರಿ, ಸಾಧಕರು ನಮಗೆಲ್ಲ ಮಾದರಿ. ಮಕ್ಕಳು ಗುರಿಯನ್ನು ಇಟ್ಟುಕೊಂಡು ಸಾಧಿಸುವ ಚಾತುರ್ಯ, ಯಾವುದರಿಂದಲೂ ವಿಚಲಿತರಾಗದ ಸಂಯಮ ಗುಣಗಳನ್ನು ರೂಢಿಸಿಕೊಳ್ಳಬೇಕು. ಇದಕ್ಕಾಗಿ ಪೂರಕ ವಾತಾವರಣ ಕುಟುಂಬ, ಶಾಲಾ, ನೆರೆ-ಹೊರೆಯವರ ಪ್ರೋತ್ಸಾಹ, ಸಮಾಜದ ಮೆಚ್ಚುಗೆ ಇವು ಮಕ್ಕಳು ಸಾಧನೆಗೈಯಲು ಸಹಾಯಕಾರಿಯಾಗಿವೆ. ಮಕ್ಕಳನ್ನು ಪ್ರೋತ್ಸಾಹಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದರು.
ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಶರಣಪ್ಪ ಸಾಸನೂರ, ಮೇಹರಅಲಿ ಢಾಲಾಯತ್, ಎ.ಎನ್. ಶಾಲಗಾರ ವಹಿಸಿಕೊಂಡಿದ್ದರು. ಮಕ್ಕಳು ಸಾಮೂಹಿಕವಾಗಿ ವಚನ ಪ್ರಾರ್ಥನೆಗೈದರು. ಎನ್.ಐ. ಮಕಾನದಾರ ಸ್ವಾಗತಿಸಿದರು. ಎಲ್.ಆರ್. ಪೂಜಾರ ನಿರೂಪಿಸಿದರು. ಆರ್.ಟಿ. ದ್ರಾಕ್ಷಾಯಣಿ ಪರಿಚಯಿಸಿದರು, ಆರ್.ಎಂ. ತೆರದಾಳ ವಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ವೈ.ಎಚ್. ಹನಮಂತಗೌಡ್ರ ಮಾತನಾಡಿ, ಮಕ್ಕಳು ಚಿಕ್ಕಂದಿನಿAದಲೇ ಉತ್ತಮ ಮೌಲ್ಯಗಳು, ಒಳ್ಳೆಯ ಹಾಗೂ ಕೆಟ್ಟ ಇವುಗಳ ಸಾಧಕ-ಬಾಧಕಗಳ ಅರಿವು, ಶಿಸ್ತುಬದ್ಧ ಜೀವನವನ್ನು ಅಳವಡಿಸಿಕೊಂಡು ಸರಿಯಾದ ಗುರಿಯನ್ನು ಗುರುತಿಸಿಕೊಂಡು ಶ್ರಮವಸಿದರೆ ಸಾಫಲ್ಯ ಪಡೆಯಬಹುದು. ಅದಕ್ಕಾಗಿ ಮಕ್ಕಳು ಉತ್ತಮ ಮೌಲ್ಯಗಳೊಂದಿಗೆ ಬೆಳೆಯಬೇಕು. ಅಕ್ಕಮಹಾದೇವಿ ಕದಳಿಶ್ರೀ ವೇದಿಕೆಯು ನಡೆಸುವ ಕಾರ್ಯಕ್ರಮವು ಮಕ್ಕಳಿಗೆ ಅತ್ಯಂತ ಉಪಯುಕ್ತವಾಗಿದೆ ಎಂದರು.



