ಹಾಸನ:- ಹೇಮಾವತಿ ನದಿ ಎಡದಂಡೆ ನಾಲೆಯಲ್ಲಿ ಕಾರೊಂದು ಪತ್ತೆಯಾಗಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ಹೊಳೆನರಸೀಪುರದ ಹರಳಹಳ್ಳಿ ಗ್ರಾಮದ ಬಳಿ ಜರುಗಿದೆ.
ನಿನ್ನೆ ಅಂದ್ರೆ ಶನಿವಾರ ರಾತ್ರಿ ನಾಲೆಗೆ ಕಾರು ಬಿದ್ದಿದೆ ಎಂದು ಶಂಕಿಸಲಾಗಿದೆ. ಕಾರನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರು ಕಾರನ್ನು ಮೇಲೆತ್ತಿದ್ದಾರೆ. ಕಾರು ಪತ್ತೆಯಾದ ಸಮೀಪದ ದೊಡ್ಡಕುಂಚೇವು ಗ್ರಾಮದ ಕೆರೆಯಲ್ಲಿ ಓರ್ವ ಪುರುಷ ಹಾಗೂ ಮಹಿಳೆಯ ಶವಗಳು ಪತ್ತೆಯಾಗಿವೆ. ಕಾರಿನಲ್ಲಿದ್ದ ಇನ್ನಿಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವಗಳ ಗುರುತು ಇನ್ನೂ ಪತ್ತೆಯಾಗಿಲ್ಲ.
ಕಾರು ಕೊಂತಗೋಡನಹಳ್ಳಿ ಗ್ರಾಮದ ಪ್ರೇಮಕುಮಾರ್ (38) ಎಂಬುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಪ್ರೇಮಕುಮಾರ್ ಆ.17ರಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.