ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣವೊಂದೇ ಮನುಷ್ಯನನ್ನು ಅತ್ಯುನ್ನತ ಸ್ಥಾನಕ್ಕೆ ತಂದು ನಿಲ್ಲಿಸಬಲ್ಲದು. ಜೀವನದಲ್ಲಿ ಸಾಧನೆಗೆ ಶಿಕ್ಷಣ ರಾಜಮಾರ್ಗ, ಶಿಕ್ಷಣದ ದಾರಿದೀಪದಿಂದಾಗಿ ಬದುಕು ಸುಂದರವಾಗಿ ರೂಪುಗೊಳ್ಳಬಲ್ಲದು. ಆದ್ದರಿಂದ ಪಾಲಕರು ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ಅವರು ನಗರದ ಕನಕ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗದಗ ಜಿಲ್ಲಾ ಘಟಕವು 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ಮುಸ್ಲಿಂ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಾಗರಿಕ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲವಿಂದು ಬದಲಾಗಿದೆ. ಇಂದಿನ ದಿನಗಳಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಸಾಕಾಗದು. ಅದರೊಟ್ಟಿಗೆ ಚಾಣಾಕ್ಷತನ, ವಿಶೇಷ ಪರಿಣಿತಿ ಮುಖ್ಯ. ಈ ಎಲ್ಲ ಅಂಶಗಳನ್ನು ಹೊಂದಿರುವ ಅಭ್ಯರ್ಥಿಗೆ ಹೆಚ್ಚಿನ ಬೇಡಿಕೆ ಸಿಗುವದು. ಅಂತಹ ಅವಕಾಶಗಳು ಎಲ್ಲ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಿಗುವಂತಾಗಲಿ, ಅವರ ಬದುಕು ಬಂಗಾರವಾಗಲಿ ಎಂದರು.
ಸಮ್ಮುಖ ವಹಿಸಿದ್ದ ಅಡವೀಂದ್ರ ಸ್ವಾಮಿಮಠದ ಧರ್ಮದರ್ಶಿ ಪೂಜ್ಯ ಮಹೇಶ್ವರ ಸ್ವಾಮಿಗಳು, ಬಳಗಾನೂರಿನ ಮೌಲಾನಾ ಇನಾಯತ್‌ವುಲ್ಲಾ ಫೀರಜಾದೆ ಹಾಗೂ ಗದಗ ಗ್ರೇಸ್ ಇಸಿಐ ಚರ್ಚ್ನ ಸಭಾ ಪಾಲಕರಾದ ರೆವರೆಂಡ್ ವಸಂತರಾಜ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಘದ ಜಿಲ್ಲಾ ಅಧ್ಯಕ್ಷ ಡಾ. ಸಿ.ಎಂ. ರಫೀ ವಹಿಸಿದ್ದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ಕೆಪಿಸಿಸಿ ಜನರಲ್ ಸೆಕ್ರೆಟರಿ ಎಸ್.ಡಿ. ಮಕಾಂದಾರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ನೂರಅಹ್ಮದ್ ಕರ್ಜಗಿ, ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಸದಸ್ಯ ಎಂ.ಎಂ. ಕಾಗದಗಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಾಜಿ ಸಂಸದ ಐ.ಜಿ. ಸನದಿ, ಸಂಘದ ಸಂಸ್ಥಾಪಕ, ರಾಜ್ಯ ಅಧ್ಯಕ್ಷ ಮೊಹ್ಮದ್‌ಸಲೀಂ ಹಂಚಿನಮನಿ, ಪ್ರಧಾನ ಕಾರ್ಯದರ್ಶಿ ಡಾ. ಇಸ್ಮಾಯಿಲ್ ಪಾಷಾ, ಕಾರ್ಯಾಧ್ಯಕ್ಷ ಅಬ್ದುಲ್‌ಖಾದರ ಮೆಣಸಗಿ, ಉಪಾಧ್ಯಕ್ಷರಾದ ಫರಹತ ಜಲಗೇರಿ, ನಿಯಾಜಅಹ್ಮದ್ ಹಂಚಿನಮನಿ, ಡಿಡಿಪಿಐ ಆರ್.ಎಸ್. ಬುರಡಿ ಉಪಸ್ಥಿತರಿದ್ದರು. ಡಿಎಸ್ಪಿ ಮುರ್ತುಜಾ ಖಾದ್ರಿ ಉಪನ್ಯಾಸ ನೀಡಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ಮುಸ್ಲಿಂ ನೌಕರರಿಗೆ, ಸಾಧಕರಿಗೆ ಸನ್ಮಾನ ಜರುಗಿತು. ನಜೀರ್‌ಅಹ್ಮದ್ ಮುಲ್ಲಾ, ಬಿ.ಎಂ. ಮುಲ್ಲಾ, ಶ್ರೀಮತಿ ಶಿರಹಟ್ಟಿ ಪ್ರಾರ್ಥಿಸಿದರು, ಫಜಲ್‌ಅಹ್ಮದ್ ನಮಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಫರಹತ ಜಲಗೇರಿ ನಿರೂಪಿಸಿದರು, ಮೋದಿನಸಾಬ ಬುಕಿಟಗಾರ ವಂದಿಸಿದರು.
ಸಾನ್ನಿಧ್ಯ ವಹಿಸಿದ್ದ ಸೂಡಿ ಜುಕ್ತಿ ಹಿರೇಮಠದ ಪೂಜ್ಯ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ವಿದ್ಯೆ ನಿರಂತರ ಸಾಧನೆಯಿಂದ ಸಾಕಾರಗೊಳ್ಳಬಲ್ಲದು. ಸಾಧನೆಗೆ ಅಸಾಧ್ಯವಾದದ್ದು ಯವುದೂ ಇಲ್ಲ. ಆದರೆ ಸಾಧಿಸಬೇಕೆಂಬ ಉತ್ಕಟ ಛಲ ಬೇಕು. ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಪಡೆದುಕೊಳ್ಳುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಂದೆ-ತಾಯಿಯನ್ನು, ದೇಶವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದರಲ್ಲದೆ, ಈ ಸಂಘಟನೆ ಉತ್ತಮವಾಗಿ ಕಾರ್ಯ ಮಾಡುತ್ತಿದ್ದು ಬರಲಿರುವ ದಿನಗಳಲ್ಲಿ ಸಂಘಟನೆ ಇನ್ನೂ ಬಲಿಷ್ಠಗೊಳ್ಳಲಿ ಎಂದರು.