ವಿಜಯಸಾಕ್ಷಿ ಸುದ್ದಿ, ರೋಣ: ಪವಿತ್ರ ಹಿಂದೂ ಧಾರ್ಮಿಕ ಸ್ಥಳಗಳ ಪಾವಿತ್ರ್ಯಕ್ಕೆ ಧಕ್ಕೆ ತಂದರೆ ಅದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಸೋಮವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಧರ್ಮದ ಉಳಿವಿಗಾಗಿ ಧರ್ಮಯುದ್ಧ ಪ್ರತಿಭಟನೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಧರ್ಮಸ್ಥಳ ಹಿಂದೂಗಳ ಪವಿತ್ರ ಕ್ಷೇತ್ರವಾಗಿದೆ. ಹಿಗಿದ್ದರೂ ಸಹ ಕೆಲ ಮತೀಯವಾದಿಗಳು ಪುಣ್ಯಕ್ಷೇತ್ರದ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಪುಣ್ಯಕ್ಷೇತ್ರಕ್ಕೆ ಕಳಂಕ ತರಲು ಹೊರಟ್ಟಿದ್ದು ಖಂಡನೀಯ. ರಾಜ್ಯ ಸರಕಾರ ಇಂತಹ ಷಡ್ಯಂತ್ರವನ್ನು ಹೆಣದಿರುವ ಮತ್ತು ಅಪಪ್ರಚಾರ ಮಾಡಿರುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅಪಮಾನಿಸುವ ದುರುದ್ದೇಶದಿಂದಲೇ ಕೆಲ ಕಿಡಿಗೇಡಿಗಳು ಹಾಗೂ ಎಡ ಪಂಥೀಯರು ವಿದೇಶಿ ಹಣವನ್ನು ಪಡೆದು ಇಂತಹ ನೀಚ ಕೃತ್ಯಕ್ಕೆ ಇಳಿದಿರುವುದು ದುರಂತವೇ ಸರಿ. ರಾಜ್ಯ ಸರಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಮತ್ತು ಹಿಂದೂ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಅಪಪ್ರಚಾರ ಮಾಡುವವರನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ ನಾಗರಾಜ ಕೆ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ರೋಣ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪೂರ, ಜಿ.ಪಂ ಮಾಜಿ ಅದ್ಯಕ್ಷ ಎನ್.ಎಸ್. ಕೆಂಗಾರ, ಮುತ್ತಣ್ಣ ಕಡಗದ, ರಮೇಶ ಚವ್ಹಾಣ, ಹನ್ಮಂತಪ್ಪ ತಳವಾರ, ಇಂದಿರಾ ತೇಲಿ, ವಿಜಯಲಕ್ಷ್ಮೀ ಕೊಟಗಿ, ಕುಮಾರ ಪಲ್ಲೇದ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಶ್ರೀಕ್ಷೇತ್ರದ ಭಕ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮುಖಂಡ ಅಶೋಕ ನವಲಗುಂದ ಮಾತನಾಡಿ, ಧರ್ಮಸ್ಥಳ ಹಿಂದೂಗಳು ಸೇರಿದಂತೆ ಎಲ್ಲ ಸಮಾಜದ, ಎಲ್ಲ ವರ್ಗದ ಜನದೂ ಭಕ್ತಿಯಿಂದ ನಡೆದುಕೊಳ್ಳುವ ಸನ್ನಿಧಿಯಾಗಿದೆ. ಇಂತಹ ಪವಿತ್ರ ಕ್ಷೇತ್ರಕ್ಕೆ ಧಕ್ಕೆ ತರುವ ಕೆಲಸದಲ್ಲಿ ಕಾಣದ ಕೈಗಳು ಸಹ ಇವೆ. ರಾಜ್ಯ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪುಣ್ಯ ಕ್ಷೇತ್ರಕ್ಕೆ ಧಕ್ಕೆ ತಂದಿರುವ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಬಿಜಿಪಿ ಪಕ್ಷದಿಂದ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಸರಕಾರವನ್ನು ಎಚ್ಚರಿಸಿದರು.