ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಘಟ್ಟವು ಪ್ರಮುಖವಾಗಿದ್ದು, ಈ ಸಂದರ್ಭದಲ್ಲಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಹ ಭಾಗಿಯಾಗಿ ದೈಹಿಕವಾಗಿ ಸದೃಢರಾಗಿ ಸಮೃದ್ಧ ಜೀವನ ನಡೆಸಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಸೋಮವಾರ ಶಿರಹಟ್ಟಿಯ ಶ್ರೀ ಎಸ್.ಎಂ. ಡಬಾಲಿ ತಾಲೂಕಾ ಕ್ರೀಡಾಣಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಎಫ್.ಬಿ. ಪೂಜಾರ ಸರಕಾರಿ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ 2025-26ನೇ ಸಾಲಿನ ಶಿರಹಟ್ಟಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದೊ೦ದು ಪ್ರತಿಭೆ ಇರುತ್ತದೆ. ಇದನ್ನು ಹೊರಹಾಕುವುದಕ್ಕೆ ಇಂತಹ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿದ್ದು, ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಕಾಲೇಜಿಗೆ, ತಂದೆ-ತಾಯಿಗೆ ಕೀರ್ತಿ ತರುವಂತವರಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನಾಗರಾಜ ಲಕ್ಕುಂಡಿ, ಶಂಕರ ಮರಾಠೆ, ಪ್ರಾಚಾರ್ಯ ಬಿ.ಜಿ. ಗಿರಿತಮ್ಮಣ್ಣವರ, ಎಂ.ಸಿ. ಭಜಂತ್ರಿ, ಹೊನ್ನಪ್ಪ ಶಿರಹಟ್ಟಿ, ಸಿ.ಸಿ. ನೂರಶೆಟ್ಟರ, ತಿಪ್ಪಣ್ಣ ಕೊಂಚಿಗೇರಿ, ರಾಮಣ್ಣ ಕಂಬಳಿ ಮುಂತಾದವರು ಉಪಸ್ಥಿತರಿದ್ದರು.