ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವವು ರವಿವಾರ ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.
Advertisement
ಸಮಂಗಲೆಯರು ಕುಂಭ-ಕಳಸಗಳಿಗೆ ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ಪೂಜಾ ಕುಣಿತ, ಶಿವತಾಂಡವ ನೃತ್ಯ, ಭಜನೆ, ನಂದಿಕೋಲ ಸೇವೆಯೊಂದಿಗೆ ಮಹಾ ರಥೋತ್ಸವವು ಸಾಗಿತು. ಶ್ರೀ ವೀರಭದ್ರ ದೇವರ ಪಾದಗಟ್ಟಿಯನ್ನು ತಲುಪಿ, ಮರಳಿ ದೇವಸ್ಥಾನಕ್ಕೆ ಬಂದಿತು. ಸಂಜೆ ಶ್ರೀ ವೀರಭದ್ರೇಶ್ವರ ರಥೋತ್ಸವವು ಎಳೆಯಲು ಸಿದ್ಧವಾಗುತ್ತಿದ್ದಂತೆ ಶಾಸಕ ಜಿ.ಎಸ್. ಪಾಟೀಲ ಆಗಮಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು.
ತೊಂಡಿಹಾಳ, ಬಂಡಿಹಾಳ, ಕರಮುಡಿ, ಬಿನ್ನಾಳ, ಯಲರ್ಗಾ, ಅಬ್ಬಿಗೇರಿ, ಜಕ್ಕಲಿ, ಕೋಟಮಚಗಿ, ನಾರಾಯಣಪೂರ, ಕೋಚಲಾಪೂರ, ತೋಟಗಂಟಿ, ದ್ಯಾಂಪೂರ, ಮಲ್ಲಾಪೂರ, ಕೋಡಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ತೇರನ್ನು ಎಳೆದು ಸಂಭ್ರಮಿಸಿದರು.