ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಿಲ್ಲೆಯಲ್ಲಿ ಆರಂಭದಲ್ಲಿ ಮುಂಗಾರು ಬೆಳೆಗಳು ಉತ್ತಮ ಫಸಲು ನೀಡುವ ನಿರೀಕ್ಷೆಯಲ್ಲಿದ್ದರೂ, ನಂತರದ ದಿನಗಳಲ್ಲಿ ಆರಂಭವಾದ ನಿರಂತರ ಮಳೆ, ಹವಾಮಾನ ವೈಪರಿತ್ಯದಿಂದಾಗಿ ಕೀಟ, ರೋಗ-ರುಜಿನಗಳಿಂದ ಬೆಳೆಗಳು ಕುಂಠಿತವಾದವು. ಇದರಿಂದ ನಿರೀಕ್ಷಿತ ಫಸಲು ಹುಸಿ ಎನಿಸಿತು. ಕೆಲವು ರೈತರು ಮರುಬಿತ್ತನೆ ಮಾಡಿದ್ದರಿಂದ ಜಮೀನುಗಳಲ್ಲಿ ಹಸಿರು ಕಾಣಿಸುತ್ತಿದೆ. ಆದರೆ ಅವುಗಳಲ್ಲಿ ಫಸಲು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಇಡೀ ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಧಾರವಾಡ ತಾಲೂಕಿನ ಮಾರಡಗಿ, ಶಿವಳ್ಳಿ, ಹೆಬ್ಬಳ್ಳಿ, ಅಮ್ಮಿನಭಾವಿ, ಮರೇವಾಡ ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಸೋಮವಾರ ಭೇಟಿ ನೀಡಿ, ಮಳೆ ಹಾನಿ ಮತ್ತು ಬೆಳೆ ಹಾನಿ ಪ್ರದೇಶಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ಈಗಾಗಲೇ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ತಂಡಗಳು, ಗ್ರಾಮವಾರು ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆಯನ್ನು ಕೈಗೊಳ್ಳಲು ಸೂಚಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ಬೆಳೆ ಹಾನಿ ಸಮೀಕ್ಷೆಯನ್ನು ಪೂರ್ಣಗೊಳಿಸಿ, ದತ್ತಾಂಶಗಳನ್ನು ದಾಖಲಿಸಲು ನಿರ್ದೇಶನ ನೀಡಲಾಗಿದೆ ಎಂದರು.
ಸರ್ಕಾರದ ಸೂಚನೆ ಇದ್ದರೂ ಕೆಲವು ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರು ರೈತರಿಂದ ಒತ್ತಾಯಪೂರ್ವಕವಾಗಿ ಸಾಲ ವಸೂಲಾತಿಗೆ ನೋಟಿಸ್ ನೀಡಿ, ಕಿರಿಕಿರಿ ಮಾಡುತ್ತಿದ್ದಾರೆ ಎಂದು ರೈತರು ದೂರು ಸಲ್ಲಿಸುತ್ತಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತವು ರೈತರಿಗೆ ಸಾಲ ವಾಸೂಲಾತಿಯಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ಮತ್ತು ಸರ್ಕಾರ ನೀಡುವ ಬೆಳೆ ಪರಿಹಾರ, ವಿಮೆ ಪರಿಹಾರದ ಸಹಾಯಧನವನ್ನು ಆಯಾ ರೈತರ ಒಪ್ಪಿಗೆ ಇಲ್ಲದೇ ಸಾಲಕ್ಕೆ ಜಮೆ ಮಾಡುವುದು ಅಥವಾ ಸಾಲದ ಖಾತೆಗಳಿಗೆ ವರ್ಗಾಯಿಸುವುದು ಅಪರಾಧ. ಆದರೆ ಈ ಕುರಿತ ಎಚ್ಚರಿಕೆಯ ಮಧ್ಯೆಯೂ ಕೆಲವು ಬ್ಯಾಂಕ್‌ಗಳ ವ್ಯವಸ್ಥಾಪಕರು ಸಾಲ ವಸೂಲಾತಿಗೆ ನೋಟಿಸ್ ನೀಡಿ, ಬೆಳೆ ನಷ್ಟದ ಸಂದರ್ಭದಲ್ಲಿ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದ್ದಾರೆ. ಈ ಕುರಿತು ಎಚ್ಚರಿಕೆ ವಹಿಸಲು ಮತ್ತು ರೈತರಿಗೆ ತೊಂದರೆ ಆಗದಂತೆ ಕ್ರಮವಹಿಸಲು ಎಲ್ಲ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಮಾರಡಗಿ ಗ್ರಾಮದ ರೈತರಾದ ಜಿ.ಎಸ್. ಪಾಟೀಲಕುಲಕರ್ಣಿ, ಪಕೀರಪ್ಪ ವನಹಳ್ಳಿ, ಹನುಮಂತ ಮಾರಡಗಿ, ಮುತ್ತುಂ ದರಗದ, ಸೋಮಣ್ಣ ಹುಬ್ಬಳ್ಳಿ, ಮುತ್ತುಂ ಸಾಬ್ ಹಾಗೂ ಹೆಬ್ಬಳ್ಳಿ ಗ್ರಾಮದ ರೈತರಾದ ಸಿ.ಬಿ. ಮಟ್ಟಿ, ಗಿರಿ ಮಲ್ಲಯ್ಯ ಉಮಚಗಿಮಠ, ಬಸವರಾಜ ತಂಬಾಕದ, ಬಸವರಾಜ ನಾಯ್ಕರ, ಬಾಳು ಕುಡೇಕಾರ, ವಿಠ್ಠಲ ಬೋವಿ, ಸುರೇಶ ಬನ್ನಿಗಿಡದ, ನಿಂಗಪ್ಪ ಶಿವಳ್ಳಿ, ಮಲ್ಲಪ್ಪ ನವಲೂರು ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳ ಬೆಳೆ ಹಾನಿ ಪ್ರದೇಶಗಳ ಭೇಟಿ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕಿ ಜಯಶ್ರೀ ಹಿರೇಮಠ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಇಮ್ತಿಯಾಜ್ ಚಂಗಾಪೂರಿ, ತಹಸೀಲ್ದಾರ ಡಾ. ಎಚ್.ಹೂಗಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಅನಗೌಡರ, ಕೃಷಿ ಅಧಿಕಾರಿ ರೇಖಾ ಬೆಳ್ಳಟ್ಟಿ, ಮೋಹನ ಲಕ್ಕಮ್ಮನವರ, ಎಚ್.ಎಮ್. ಬಾದಾಮಿ, ತೋಟಗಾರಿಕೆ ಇಲಾಖೆಯ ಯೋಗೇಂದ್ರ, ಅಮ್ಮಿನಭಾವಿ ಕಂದಾಯ ನಿರೀಕ್ಷಕ ಸಂಪತ್‌ಕುಮಾರ ಒಡೆಯರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ರೈತ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
ರೈತರ ಎಲ್ಲ ಸಮಸ್ಯೆಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಸರ್ಕಾರದಿಂದ ಸಾಧ್ಯವಾದ ಎಲ್ಲಾ ನೆರವು ದೊರಕುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಬೆಳೆ ವಿಮಾ ಯೋಜನೆಯಡಿಯಲ್ಲಿ ರೈತರು ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ಹಾನಿ ಅಂದಾಜು ಪ್ರಕ್ರಿಯೆ ಆರಂಭವಾಗಿದೆ. ಶೀಘ್ರದಲ್ಲೇ ಪರಿಹಾರ ವಿತರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಭರವಸೆ ನೀಡಿದರು.