ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಧರ್ಮ, ಸಂಸ್ಕಾರ, ಮಾನವೀಯ ಮೌಲ್ಯಗಳ ಬಂಡವಾಳದಿಂದ ಮನುಷ್ಯನಿಗೆ ಶ್ರೇಷ್ಠತೆಯ ಬದುಕು ಪ್ರಾಪ್ತಿಯಾಗುತ್ತದೆ. ಅದಕ್ಕಾಗಿ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಪುರಾಣ, ಪುಣ್ಯಕಥೆ, ಸದ್ವಿಚಾರ, ಸತ್ ಚಿಂತನೆ ಮತ್ತು ಸತ್ಸಂಗಗಳ ಅವಶ್ಯಕತೆ ಬಹಳಷ್ಟಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಅವರು ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಶಿಕ್ಷಣ ಸಂಸ್ಥೆಗಳಿಂದ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಪುರಾಣ ಪ್ರವಚನದ ಮಹಾಮಂಗಲೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನದ ಶಾಂತಿಗೆ, ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಾಕಿರಣ. ಸಂಸ್ಕಾರ-ಸಂಸ್ಕೃತಿಗಳ ಪುನರುತ್ಥಾನದಿಂದ ಜಗದಲ್ಲಿ ಶಾಂತಿ, ಸಾಮರಸ್ಯ ನೆಲೆಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಬಳಗದವರು ಪುರಾಣ ಪ್ರವಚನದಿಂದಲೇ ಶೈಕ್ಷಣಿಕ ಕ್ರಾಂತಿ ಮಾಡಿ ಸಮಾಜ ಸುಧಾರಣೆ ಮಾಡುತ್ತಿರುವುದು ಶ್ಲಾಘನೀಯ. ಮಹಾತ್ಮರು, ಪುಣ್ಯ ಪುರುಷರ ನೀಡಿದ ಮಾನವೀಯ ಮೌಲ್ಯಗಳ ಅಮೂಲ್ಯ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕತೆ ಪಡೆಯುತ್ತದೆ ಎಂದರು.
ಶ್ರಾವಣ ಮಾಸದುದ್ದಕ್ಕೂ ನಡೆದ ಪುರಾಣ ಪ್ರವಚನಕಾರರಾಗಿ ಪ್ರಾಚಾರ್ಯ ಪ್ರಭುಗೌಡ ಯಕ್ಕಿಕೊಪ್ಪ ಅವರು ಶ್ರೀ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಲೀಲಾಮೃತ ಚರಿತ್ರೆಯ ಪುರಾಣವನ್ನು ಹೇಳಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ರಾಜೇಶ್ವರಿ ಪಾಟೀಲವಹಿಸಿದ್ದರು. ಜಯಲಕ್ಷ್ಮೀ ಗಡ್ಡದೇವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷೆ ಸುವರ್ಣಾಬಾಯಿ ಬಹದ್ದೂರದೇಸಾಯಿ, ಉಪಾಧ್ಯಕ್ಷೆ ಜಯಲಕ್ಷ್ಮೀ ಮಹಾಂತಶೆಟ್ಟರ, ರೋಹಿಣಿಬಾಯಿ ಬಹದ್ದೂರದೇಸಾಯಿ, ಅಶ್ವಿನಿ ಸಾಲಿಮಠ, ಸರಸ್ವತಿ ಹುಲ್ಲಣ್ಣನವರ, ಜೆ.ಡಿ. ಲಮಾಣಿ, ಸ್ವಾತಿ ಪೈ, ವಿಜಯಕುಮಾರ ಬಿಳೆಯಲಿ ಇದ್ದರು. ಶಾರಕ್ಕ ಮಹಾಂತಶೆಟ್ಟರ ಸ್ವಾಗತಿಸಿದರು. ಎಂ.ಸಿ. ಹಿರೇಮಠ, ಸಚ್ಚಿದಾನಂದ ಮಠದ ನಿರೂಪಿಸಿದರು, ರೂಪಾ ನವಲೆ ವಂದಿಸಿದರು.
ಬಾಗಲಕೋಟೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿ.ವಿ. ಸಾಲಿಮಠ ಸನ್ಮಾನ ಸ್ವೀಕರಿಸಿ ಮಾತನಾಡಿ, ಲಿಂ.ವೀರಗಂಗಾಧರ ಜಗದ್ಗುರುಗಳ ಕೃಪಾಶೀರ್ವಾದಿಂದ ಮಹಿಳೆಯರಿಂದಲೇ ಪ್ರಾರಂಭಗೊಂಡ ತಾಯಿ ಪಾರ್ವತಿ ಮಕ್ಕಳ ಬಳಗದ ಶಾಲೆ ಅವರ ಆಶೀರ್ವಾದದಿಂದಲೇ ಅಮೃತಮಹೋತ್ಸವ ಆಚರಣೆಯಲ್ಲಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಈ ಸಂಸ್ಥೆ ಇದೇ ರೀತಿ ಶಿಕ್ಷಣದ ಜತೆಗೆ ಮಕ್ಕಳಿಗೆ ಧರ್ಮ ಸಂದೇಶ, ಸನ್ಮಾರ್ಗದ ಶಿಕ್ಷಣ ನೀಡಲಿ. ಮಕ್ಕಳು ಮೊಬೈಲ್, ಟಿವಿಯಿಂದ ಸಮಯ ವ್ಯರ್ಥ ಮಾಡದೇ ವಿದ್ಯಾಭ್ಯಾಸಕ್ಕೆ ಒತ್ತು ಕೊಡಬೇಕು. ವಿದ್ಯೆಗೆ ವಿನಯ, ಸಂಸ್ಕಾರ ಭೂಷಣವಾಗಿದ್ದು ಗುರು-ಹಿರಿಯರೊಂದಿಗೆ ವಿನಮ್ರತೆ, ಗೌರವಯುತವಾಗಿ ನಡೆದುಕೊಳ್ಳಬೇಕು ಎಂದರು.