ಮಹಿಳೆಯರಲ್ಲಿ ಅಸಾಮಾನ್ಯ ಶಕ್ತಿಯಿದೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮಾನವನ ಪ್ರಗತಿ ಹಾಗೂ ಅಮೋಘ ಸಾಧನೆಗಳ ಹಿಂದೆ ಬದುಕಿನ ಸತ್ಯ ಪರೀಕ್ಷೆಗಳನ್ನು ಗಟ್ಟಿಯಾಗಿ ನಿಂತು ಎದುರಿಸಿ ಮುಂದೆ ಸಾಗುವುದರಲ್ಲಿ ನಮ್ಮ ಮಹಿಳೆಯರ ಸುವ್ಯಕ್ತ ಪಾತ್ರವಿದೆ ಎಂಬುದಕ್ಕೆ ಇತಿಹಾಸದ ಪುಟಗಳು ಪ್ರಮುಖ ಸಾಕ್ಷಿಗಳಾಗಿವೆ ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಕವಿತಾ ದಂಡಿನ ಹೇಳಿದರು.

Advertisement

ಅವರು ಗದುಗಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗದಗ ಜಿಲ್ಲಾ, ಗದಗ ತಾಲೂಕಿನ, ಗದಗ ಶಹರ ವಲಯದ ತ್ರಿಕೂಟೇಶ್ವರ ಕಾರ್ಯ ಕ್ಷೇತ್ರದಲ್ಲಿ ಉಡಚಮ್ಮ ದೇವಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವದಲ್ಲಿ `ಸಾಧಕ ಮಹಿಳೆಯರು’ ವಿಷಯವಾಗಿ ಉಪನ್ಯಾಸ ನೀಡಿ ಮಾತನಾಡಿದರು.

ಮಹಿಳೆಯರಲ್ಲಿ ಅಸಾಮಾನ್ಯ ಶಕ್ತಿ ಇದೆ. ಮುಖ್ಯವಾಗಿ ಸಾಧಿಸುವ ಮನಸ್ಸು ಇರಬೇಕು. ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮಹಿಳೆಯರು ಸಬಲರಾದಾಗ ಮಾತ್ರ ಶೋಷಣೆಗಳಿಂದ ಮುಕ್ತಿ ಹೊಂದಬಹುದು. ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಸ್ತ್ರೀಶಕ್ತಿ ಗುಂಪುಗಳು ಸ್ತ್ರೀಯರಲ್ಲಿ ಆರ್ಥಿಕ ಸಧೃಡತೆಯೊಂದಿಗೆ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿವೆ ಎಂದರು.

ಗದಗ ತಾಲೂಕಿನ ಸಂಘದ ಯೋಜನಾಧಿಕಾರಿ ಉಮಾ ಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರೆಲ್ಲರೂ ಒಂದಲ್ಲ ಒಂದು ರೀತಿಯಿಂದ ಸಾಧಕ ಮಹಿಳೆಯರೇ. ಮನೆಯನ್ನು ಸದೃಢವಾಗಿ ನಿಭಾಯಿಸಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಬದುಕಿನಲ್ಲಿ ಸಾಧನೆಯನ್ನು ಮೆರೆದ ಮಹಿಳಾ ಮಣಿಗಳು ಇಂದು ನಮ್ಮೆದುರು ಇದ್ದಾರೆ. ಸಾಧಕರಿಗೆ ಶ್ರಮವಿಲ್ಲ. ಕುಟುಂಬವನ್ನು ಪ್ರೀತಿಯಿಂದ ಅಚ್ಚುಕಟ್ಟಾಗಿ ಮುನ್ನಡೆಸುವ ಮಹಿಳೆಯರು ಅದರೊಂದಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮರ್ಥವಾಗಿ ಆಡಳಿತವನ್ನು ನಿಭಾಯಿಸಿದ್ದಾರೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಗದಗ-ಬೆಟಗೇರಿ ನಗರಸಭೆಯ ಸದಸ್ಯೆ ಶೈಲಾ ಬಾಕಳೆ ಮಾತನಾಡಿ, ಸ್ತ್ರೀ ಶಕ್ತಿ ಗುಂಪುಗಳು ಮಹಿಳೆಯರನ್ನು ಒಟ್ಟುಗೂಡಿಸಿ ಅವರಲ್ಲಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಆರ್ಥಿಕವಾಗಿ ಸದೃಢತೆ ಹೊಂದಲು ಹಣದ ಉಳಿತಾಯ ಅವಶ್ಯಕ. ಗುಂಪುಗಳಿಂದ ಒಗ್ಗಟ್ಟು, ಪರಸ್ಪರ ಪರಿಚಯ ಬೆಳೆದು ಬರುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಗಂಗಮ್ಮ ಮರಾಠೆ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ಸ್ತ್ರೀಶಕ್ತಿ ಗುಂಪುಗಳ ಯೋಜನೆಗಳು ಬಹಳ ಉಪಯೋಗಕಾರಿಯಾಗಿವೆ. ತಗೆದುಕೊಳ್ಳುವ ಹಾಗೂ ಕೊಡುವ ಹಣಕಾಸಿನ ವ್ಯವಹಾರವನ್ನು ಎಲ್ಲ ಸದಸ್ಯರು ನಿಷ್ಠೆಯಿಂದ ಮಾಡಬೇಕು. ಆರ್ಥಿಕವಾಗಿ ನಮಗೆಲ್ಲ ಇದು ಸಹಾಯಕಾರಿಯಾಗಿದೆ ಎಂದರು.

ಸ್ತ್ರೀಶಕ್ತಿ ಕೇಂದ್ರದ ಸದಸ್ಯರಿಂದ ಸಾಮೂಹಿಕ ನೃತ್ಯ, ಗಾಯನ, ಆಟೋಟ ಮುಂತಾದ ಕಾರ್ಯಕ್ರಮಗಳು ಜರುಗಿದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶ್ರೀ ವಿರಭದ್ರೇಶ್ವರ ಸ್ತ್ರೀಶಕ್ತಿ ಗುಂಪಿನ ಸದಸ್ಯರಾದ ಸುವರ್ಣ ಮೃತ್ಯುಂಜಯಮಠ ಹಾಗೂ ಶೋಭಾ ಬಾಂಢಗೆ ಪ್ರಾರ್ಥಿಸಿದರು. ವಿದ್ಯಾ ಮಳಗಿ ಸ್ವಾಗತ ಗೀತೆ ಹೇಳಿದರು. ಶಿಲ್ಪಾ ಬದಿ ಸ್ವಾಗತಿಸಿದರು. ಅನಿತಾ ಮೃತ್ಯುಂಜಯಮಠ ನಿರೂಪಿಸಿದರು. ಕೊನೆಯಲ್ಲಿ ಸಂಗೀತಾ ವಂದಿಸಿದರು.

ಕಾರ್ಯಕ್ರಮದಲ್ಲಿ ಪಾಂಡುರಂಗ ಸ್ತ್ರೀಶಕ್ತಿ ಸಂಘ, ಲಕ್ಷ್ಮೀ ಸ್ತ್ರೀಶಕ್ತಿ ಸಂಘ, ಕಾಳಿಕಾ ದೇವಿ ಸ್ತ್ರೀಶಕ್ತಿ ಸಂಘದ ಹನುಮಂತಿ ಕೊಳ್ಳಿ, ಅನುರಾಧಾ ಲದ್ವಾ, ಅನಿತಾ ಕಾಟೇಕರ, ಅಮೃತಾ ಲದ್ವಾ, ಮಾಲಾ ಡಾನಿ, ನನ್ನಿಮಾ ನಾಗನೂರ, ವಿಜಯಲಕ್ಷ್ಮೀ ಮಡಿವಾಳರ ಮುಂತಾದವರು ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಕೇಂದ್ರದ ಅಧ್ಯಕ್ಷೆ ಸರೋಜಾ ಶೇಜವಾಡಕರ ವಹಿಸಿ ಮಾತನಾಡಿ, ಮಹಿಳಾ ಶಕ್ತಿ ಗುಂಪುಗಳು ಶಕ್ತಿಯ ಸಂಕೇತ. ಒಗ್ಗಟ್ಟು, ಪರಸ್ಪರ ಸಹಕಾರ ಇಲ್ಲಿ ಕಂಡು ಬರುತ್ತದೆ. ಮಾತನಾಡುವ ಕಲೆ ಹಾಗೂ ಪ್ರತಿಭೆಗೂ ಇಲ್ಲಿ ಅವಕಾಶ ಉಂಟಾಗುತ್ತದೆ. ಹೀಗಾಗಿ ಸ್ತ್ರೀ ಶಕ್ತಿ ಗುಂಪುಗಳು ಮಹಿಳೆಯರಲ್ಲಿ ಸದೃಢವಾದ ಬೆಳವಣಿಗೆಯನ್ನು ಮೂಡಿಸುತ್ತವೆ ಎಂದರು.


Spread the love

LEAVE A REPLY

Please enter your comment!
Please enter your name here