9ನೇ ದಿನಕ್ಕೆ ಮುಂದುವರೆದ ಅಹೋರಾತ್ರಿ ಧರಣಿ; ಜಿಲ್ಲಾಡಳಿತದ ವಿರುದ್ಧ ರೈತರ ಆಕ್ರೋಶ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸತತ 9 ದಿನಗಳಿಂದ ಜಿಲ್ಲಾಡಳಿತದ ಎದುರು ಉತ್ತರ ಕರ್ನಾಟಕ ಮಹಾಸಭಾದಿಂದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲೆಯ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಮಂಗಳವಾರ ಜಿಲ್ಲಾಡಳಿತದ ಎದುರು ಗೋವನ್ನು ಕಟ್ಟಿ ಮೇವು ಹಾಕುವುದರೊಂದಿಗೆ ಆಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಮಂಗಳವಾರ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಧರಣಿ ಸ್ಥಳಕ್ಕೆ ಭೇಟಿ ನೀಡಿ, ರೈತರನ್ನು ಬೆಂಬಲಿಸಿ ಮಾತನಾಡುತ್ತಾ, ಅಹೋರಾತ್ರಿ ಹೋರಾಟ ಪ್ರಾರಂಭವಾಗಿ 8 ದಿನಗಳಾದರೂ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಧರಣಿ ನಿರತರನ್ನು ಭೇಟಿಯಾಗಿ ಅವರ ನ್ಯಾಯಯುತವಾದ ಬೇಡಿಕೆಗಳನ್ನು ಇಡೇರಿಸದಿರುವುದು ಖೇದಕರ ಸಂಗತಿ. ರೈತರು ತಲೆತಲಾಂತರಗಳಿಂದ ಅರಣ್ಯ ಜಮೀನುಗಳನ್ನು ಸಾಗುವಳಿ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ. ಆದರೆ ಸರ್ಕಾರ ಹಕ್ಕುಪತ್ರ ನೀಡದೇ, ರೈತರಿಗೆ ಕಿರುಕುಳ ನೀಡುತ್ತಿದೆ. ಜೊತೆಗೆ ನಾಗಾವಿ ಗ್ರಾಮದಲ್ಲಿನ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ ರೈತರು ಪೂರ್ವಜರ ಕಾಲದಿಂದ ಸಾಗುವಳಿ ಮಾಡುತ್ತಿದ್ದ ನೂರಾರು ಎಕರೆ ಕೃಷಿ ಭೂಮಿಯನ್ನು ಪರಿಹಾರ ನೀಡದೇ ಒಕ್ಕಲೆಬ್ಬಿಸಿರುವುದು ಖಂಡನೀಯ ಎಂದರು.

ಮಳೆ-ಚಳಿ ಎನ್ನದೇ ರೈತರು ತಮ್ಮ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ರಾತ್ರಿಯಿಡೀ ಹೋರಾಟ ಮಾಡುತ್ತಿದ್ದಾರೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಕೂಡಲೇ ಈ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ಬಿಜೆಪಿ ಮುಖಂಡರಾದ ಕರಿಗೌಡ್ರ, ಭದ್ರೇಶ ಕುಸಲಾಪುರ, ಸಂಜೀವ ಸ್ವಾಮಿಗಳು ಅಶೋಕ ಕರೂರು, ಶೇಷಗಿರಿ ಮುಂತಾದವರು ಭಾಗವಹಿಸಿದ್ದರು.

ಸುರೇಶ ಮಹಾರಾಜ, ಧನ್ನುರಾಮ ತಂಬೂರಿ ಇವರುಗಳು ಭಜನೆಯ ಮೂಲಕ ಆತ್ಮಸ್ಥೈರ್ಯ ತುಂಬಿದರು. ಪ್ರತಿಭಟನಾ ಸ್ಥಳದಲ್ಲಿ ಎನ್.ಟಿ. ಪೂಜಾರ, ಚಂಬಣ್ಣ ಚನ್ನಪಟ್ಟಣ, ನಾಮದೇವ, ನಿಂಗಪ್ಪ, ಚನ್ನಪ್ಪ ಭಗತ ಸೇರಿದಂತೆ ಜಿಲ್ಲೆಯ ಹಲವು ರೈತರು, ಮಹಿಳೆಯರು ಇದ್ದರು.

ಗೋವಿಗೆ ಪೂಜೆ

ಗೋಮಾತೆಗೆ ಪೂಜೆಯನ್ನು ಮಾಡಿ ಜಿಲ್ಲಾಡಳಿತ ಕಛೇರಿ ಆವರಣದಲ್ಲಿಯೇ ಕಟ್ಟಿ, ಗೋವಿಗೆ ಹುಲ್ಲನ್ನು ಹಾಕಿ ಮೇಯಿಸಿ ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ಜಾನುವಾರುಗಳನ್ನು ಜಿಲ್ಲಾಡಳಿತ ಕಛೇರಿ ಎದುರು ತರುತ್ತೇವೆಂದು ಜಿಲ್ಲಾಡಳಿತದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಸತತ ಎಂಟು ದಿನಗಳಿಂದ ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗಾಗಿ ಅಹೋರಾತ್ರಿ ಧರಣಿಗೆ ಕುಳಿತಿದ್ದಾರೆ. ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲರು ರೈತರನ್ನು ಸೌಜನ್ಯಕ್ಕಾದರೂ ಭೇಟಿಯಾಗದಿರುವುದು ದುರದೃಷ್ಟಕರ ಸಂಗತಿ. ಕೂಡಲೇ ರೈತರ ನ್ಯಾಯಯುತವಾದ ಬೇಡಿಕೆಗಳನ್ನು ಜಿಲ್ಲಾಡಳಿತ ಇಡೇರಿಸಬೇಕು.

– ಎಸ್.ವಿ. ಸಂಕನೂರ.

ವಿಧಾನ ಪರಿಷತ್ ಸದಸ್ಯರು.


Spread the love

LEAVE A REPLY

Please enter your comment!
Please enter your name here