ಬೆಂಗಳೂರು:– ಕುಡಿದ ಮತ್ತಲ್ಲಿ ಕುಡುಕನೋರ್ವ ಗಣಪನ ವಿಗ್ರಹವನ್ನೇ ವಿರೂಪಗೊಳಿಸಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕಳೆದ 23 ರಂದು ಘಟನೆ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಿವು ಬಂಧಿತ ಆರೋಪಿ. ಎಸ್, ಗರ್ವೇಭಾವಿಪಾಳ್ಯದ ಖಾಸಗಿ ಬಿಲ್ಡಿಂಗ್ ಬಳಿ 2 ಅಡಿ ಎತ್ತರದ ಕಲ್ಲಿನ ಗಣೇಶ ವಿಗ್ರಹ ಇರಿಸಲಾಗಿತ್ತು. ಕಳೆದ 24 ರಂದು ಬೆಳಗ್ಗೆ ಸ್ಥಳೀಯರು ನೋಡಿದಾಗ ವಿಗ್ರಹ ವಿರೂಪವಾಗಿತ್ತು. ವಿಗ್ರಹದ ಎಡ ಕಿವಿ ಮತ್ತು ಎಡ ಕೈ ಭಾಗಗಳು ಹಾನಿಯಾಗಿತ್ತು. ಕಿಡಿಗೇಡಿಗಳು ವಿಗ್ರಹ ವಿರೂಪಗೊಳಿಸಿದ್ದಾರೆಂದು ಸ್ಥಳೀಯರು ದೂರು ನೀಡಿದ್ದಾರೆ. ನಂತರ ಪರಿಶೀಲನೆ ನಡೆಸಿದಾಗ ಶಿವುವಿನಿಂದ ಕೃತ್ಯ ನಡೆದಿರೋದು ಬೆಳಕಿಗೆ ಬಂದಿದೆ.
ಹಿಂದಿನ ದಿನ ರಾತ್ರಿ ಕುಡಿದು ಬಿಲ್ಡಿಂಗ್ ಬಳಿ ಆರೋಪಿ ಶಿವು ಬಂದಿದ್ದ. ಈ ವೇಳೆ ಗಣೇಶ ಮೂರ್ತಿಗೆ ಕೈ ಮುಗಿದು ಭಕ್ತಿ ತೋರಲು ಹೋಗಿದ್ದ. ಮದ್ಯಪಾನ ಮಾಡಿ ದೇವರಿಗೆ ಕೈಮುಗಿಯಲು ಹೋಗಿ ಆಯತಪ್ಪಿ ಬಿದ್ದಿದ್ದಾನೆ. ಈ ವೇಳೆ ವಿಗ್ರಹ ವಿರೂಪಗೊಂಡಿದೆ. ದೂರಿನ ಆಧಾರದ ಮೇರೆಗೆ ಇದೀಗ ಶಿವುನನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಘಟನೆ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.