ದೇಹಕ್ಕೆ ವ್ಯಾಯಾಮ ನೀಡುವ ಒಂದು ಚಟುವಟಿಕೆ ಅಂದರೆ ಅದು ವಾಕಿಂಗ್. ಈ ವರ್ಕೌಟ್‌ಗೆ ಯಾವುದೇ ಹಣ ನೀಡಬೇಕಿಲ್ಲ, ಸಾಧನಗಳ ಅಗತ್ಯವಿಲ್ಲ. ನಡೆಯುವ ಮೂಲಕವೇ ಬೇಕಾದಷ್ಟು ಆರೋಗ್ಯದ ಪ್ರಯೋಜನಗಳನ್ನು ದೇಹಕ್ಕೆ ನೀಡಬಹುದು.
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಪ್ರತಿದಿನ ವಾಕಿಂಗ್ ಮಾಡುವುದು ತುಂಬಾ ಪ್ರಯೋಜನಕಾರಿ ಆಗಿದೆ. ಏಕೆಂದರೆ ವಾಕಿಂಗ್ ದೇಹದ ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯಕವಾಗಿದೆ. ಆದರೆ ವಾಕಿಂಗ್ ಜೊತೆಗೆ ಕೆಲ ಆಹಾರ ಕ್ರಮಗಳನ್ನು ಅನುಸರಿಸುವುದರ ಮೂಲಕ ಕೂಡ ತೂಕ ಹೆಚ್ಚಾಗುವುದನ್ನು ತಡೆಯಬಹುದು. ಅದರಲ್ಲೂ ಈ ಸಮಯದಲ್ಲಿ ವಾಕಿಂಗ್ ಮಾಡಿದರೆ ನಿಮ್ಮ ದೇಹದ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು.
ವಾಕಿಂಗ್ ಒಂದು ಸರಳ ವ್ಯಾಯಾಮವಾಗಿದ್ದು, ಇದು ಮನಸ್ಥಿತಿಯನ್ನು ಸುಧಾರಿಸುವುದಲ್ಲದೆ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ತೂಕ ಇಳಿಕೆ, ಮನಸ್ಥಿತಿ ಸುಧಾರಣೆ, ಹೃದಯದ ಆರೋಗ್ಯ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದರಲ್ಲೂ ಪ್ರಶಾಂತವಾದ ವಾತಾವರಣ, ತಾಜಾ ಗಾಳಿ ಸಿಗುವ ಬೆಳಗಿನ ಸಮಯದಲ್ಲಿ ವಾಕಿಂಗ್ ಮಾಡುವುದು ಇನ್ನೂ ಉತ್ತಮ. ಹೀಗೆ ಬೆಳಗ್ಗೆ ವಾಕಿಂಗ್ ಮಾಡುವ ಅಭ್ಯಾಸ ನಿಮಗೂ ಇದ್ಯಾ? ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ ನಿಜ. ಆದರೆ ಬೆಳಗಿನ ವಾಕಿಂಗ್ ವೇಳೆ ಈ ಕೆಲವೊಂದಿಷ್ಟು ತಪ್ಪುಗಳನ್ನು ಮಾಡಿದರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆ ತಪ್ಪುಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಬೆಳಗಿನ ವಾಕಿಂಗ್ ವೇಳೆ ಈ ತಪ್ಪುಗಳನ್ನು ಮಾಡದಿರಿ:
ನೀರು ಕುಡಿಯದೇ ಇರುವುದು:
ನೀರು ಕುಡಿಯದೆ ವಾಕಿಂಗ್ ಹೋಗುವಂತಹ ತಪ್ಪನ್ನು ಮಾಡಬೇಡಿ. ಈ ತಪ್ಪು ದೇಹವನ್ನು ಬೇಗನೆ ದಣಿದಂತೆ ಮಾಡುತ್ತದೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಹಾಗಾಗಿ ವಾಕಿಂಗ್ ಹೋಗುವ 15 ರಿಂದ 20 ನಿಮಿಷಗಳ ಮೊದಲು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ.
ಖಾಲಿ ಹೊಟ್ಟೆಯಲ್ಲಿ ದೀರ್ಘ ಹೊತ್ತು ವಾಕಿಂಗ್:
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸುದೀರ್ಘ ಕಾಲ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಬಹುದು, ಇದು ತಲೆತಿರುಗುವಿಕೆ, ಆಯಾಸ ಅಥವಾ ತಲೆನೋವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀವು ಬೆಳಗ್ಗೆ 20 ನಿಮಿಷಗಳಿಗಿಂತ ಹೆಚ್ಚು ವಾಕಿಂಗ್ ಮಾಡುತ್ತೀರಿ ಎಂದಾದರೆ, ವಾಕಿಂಗ್ ಮಾಡುವ ಮುನ್ನ ಬಾಳೆ ಹಣ್ಣು, ನೆನೆಸಿದ ಕಡಲೆಕಾಯೊ ಅಥವಾ ಒಂದು ಹಿಡಿ ಒಣ ಹಣ್ಣಿನಂತಹ ಆರೋಗ್ಯಕರ ಆಹಾರವನ್ನು ಸೇವಿಸಿ.
ವಾರ್ಮ್‌ಅಪ್ ಮಾಡದೆ ನಡೆಯುವುದು:
ಬೆಳಗ್ಗೆ ದೇಹವನ್ನು ವಾರ್ಮ್ ಅಪ್ ಮಾಡದೆ ವಾಕಿಂಗ್ ಮಾಡಿದರೆ ಇದರಿಂದ ಸ್ನಾಯುಗಳು ಮತ್ತು ಕೀಲುಗಳ ಮೇಲೆ ಒತ್ತಡ ಬೀಳುತ್ತದೆ. ಆದ್ದರಿಂದ, ವಾಕಿಂಗ್ ಮಾಡುವ ಮುನ್ನ ಎರಡರಿಂದ ಐದು ನಿಮಿಷಗಳ ಕಾಲ ದೇಹವನ್ನು ವಾರ್ಮ್ ಅಪ್ ಮಾಡಿಕೊಳ್ಳಿ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು:
ಕೆಲವರು ವಾಕಿಂಗ್ ಹೋಗುವ ಮೊದಲು ದೇಹಕ್ಕೆ ಶಕ್ತಿ ಲಭಿಸಲೆಂದು ಒಂದು ಕಪ್ ಕಾಫಿ ಕುಡಿಯುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಏಕೆಂದರೆ ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವನೆ ಮಾಡುವುದರಿಂದ ಆಮ್ಲೀಯತೆ, ಎದೆಯುರಿ ಕಾಣಿಸಿಕೊಳ್ಳುವುದಲ್ಲದೆ ನರಗಳ ಮೇಲೆ ಒತ್ತಡ ಕೂಡ ಉಂಟಾಗುತ್ತದೆ. ಆದ್ದರಿಂದ ವಾಕಿಂಗ್ ಬಳಿಕ ಲಘು ಉಪಹಾರವನ್ನು ಸೇವಿಸಿ, ಕಾಫಿ ಕುಡಿಯಿರಿ.
ಶೌಚಾಲಯಕ್ಕೆ ಹೋಗದಿರುವುದು:
ಹೊರಗೆ ವಾಕಿಂಗ್ ಹೋಗುವ ಮೊದಲು ವಾಶ್‌ರೂಮ್‌ಗೆ ಹೋಗುವುದನ್ನು ತಪ್ಪಿಸುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕ. ಇದು ಹೊಟ್ಟೆ ಸಂಬಂಧಿ ಸಮಸ್ಯೆಗಳು ಮತ್ತು ಯುಟಿಐ (ಮೂತ್ರನಾಳದ ಸೋಂಕು) ನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ವಾಕಿಂಗ್‌ಗೆ ಹೋಗುವ ಮೊದಲು, ಖಂಡಿತವಾಗಿಯೂ ವಾಶ್‌ರೂಮ್‌ಗೆ ಹೋಗಿ, ಇದರಿಂದ ನೀವು ಪೂರ್ಣ ಮನಸ್ಸಿನಿಂದ ಮತ್ತು ಶಾಂತಿಯುತವಾಗಿ ವಾಕಿಂಗ್ ಮಾಡಲು ಸಾಧ್ಯ.