ಗದಗ: ಬೆಟಗೇರಿ ಬಡಾವಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬೆಟಗೇರಿ ಬಡಾವಣೆಯಲ್ಲಿ ನಡೆದಿದ್ದ ಸುಲಿಗೆ ಪ್ರಕರಣ ಭೇದಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಉತ್ತರಪ್ರದೇಶ ಮೂಲದ ರವಿ ಬಾವರಾ(33), ಮೊಹ್ಮದ ಶರೀಫ್ @ ಮೊಹ್ಮದ ಸಾಹಿಲ್ ಸಿದ್ದಕಿ (25) ಬಂಧಿತ ಆರೋಪಿಗಳಾಗಿದ್ದು, 03/08/2025 ರಂದು ಬೆಳಿಗ್ಗೆ ಗದಗ ಶಿವಸಾಯಿನಗರದ ಬನ್ನಿಕಟ್ಟೆಯ ಬಳಿ ಜಯಲಕ್ಷ್ಮೀ ರಾಮಕೃಷ್ಣ ಮಹೇಂದ್ರಕರ ಎಂಬುವವರ 20 ಗ್ರಾಂ ಮಂಗಳಸೂತ್ರವನ್ನು ಎಗರಿಸಿದ್ದರು.
ಕಪ್ಪು ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಂಗಳಸೂತ್ರವನ್ನ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿದ ಪೊಲೀಸರು, ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ, ಉಪ-ಅಧೀಕ್ಷಕ ಮುರ್ತುಜಾ ಖಾದ್ರಿ, ಸಿಇಎನ್ ಡಿಎಸ್ಪಿ ಮಾಹಾಂತೇಶ ಸಜ್ಜನ, ಬೆಟಗೇರಿ ಸಿಪಿಐ ಧೀರಜ್ ಬಿ. ಶಿಂಧೆ, ಪಿಐ ಸಂಗಮೇಶ ಶಿವಯೋಗಿ, ಪಿಐ ಸಿದ್ದರಾಮೇಶ್ವರ ಗಡೇದ ಮತ್ತು ತಾಂತ್ರಿಕ ವಿಭಾಗದ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು.
ಪಿಎಸ್‌ಐಗಳಾದ ಮಾರುತಿ ಎಸ್. ಜೋಗದಂಡಕರ, ಬಿ.ಟಿ. ರಿತ್ತಿ ನೇತೃತ್ವದಲ್ಲಿ ಎಎಸ್‌ಐ ಬಿ.ಎಫ್. ಯರಗುಪ್ಪಿ, ಸಿಬ್ಬಂದಿಗಳಾದ ಎನ್.ಡಿ. ಹುಬ್ಬಳ್ಳಿ, ಪರಶುರಾಮ ಎಚ್. ದೊಡಮನಿ, ಪ್ರವೀಣ ಕಲ್ಲೂರ, ನಾಗರಾಜ ಬರಡಿ, ಅಶೋಕ ಗದಗ, ಅಕ್ಷಯ ಬದಾಮಿ, ಅವಿನಾಶಸಿಂಗ್ ಬ್ಯಾಳಿ, ಗೌರಮ್ಮ ಕಂಡೆಣ್ಣನವರ, ಮಂಜು ಆರ್. ಲಮಾಣಿ, ಎಸ್.ಎಚ್. ಗುಡ್ಡಿಮಠ, ಮಂಜು ಅಸೂಟಿ, ಅನಿಲ ಬನ್ನಿಕೊಪ್ಪ, ಮತ್ತು ತಾಂತ್ರಿಕ ವಿಭಾಗದ ಅಧಿಕಾರಿಗಳಾದ ಶಿವಕುಮಾರ ಟಿ., ಗುರುರಾಜ ಬೂದಿಹಾಳ, ಸಂಜು ಕೊರಡೂರ ಈ ತಂಡದಲ್ಲಿ ಇದ್ದರು.
ಆರೋಪಿಗಳನ್ನು ಬೆನ್ನಟ್ಟಿದ ಪೊಲೀಸರು ಕೊಲ್ಲಾಪೂರದ ಗಾಂಧಿನಗರದಲ್ಲಿ ಬಂಧಿಸಿದ್ದಾರೆ. ಈಗಾಗಲೇ ಆರೋಪಿಗಳ ಮೇಲೆ ಬಾಗಲಕೋಟೆ, ಆಂಧ್ರಪ್ರದೇಶದ ಗುಂತಕಲ್ ಮತ್ತು ಅನಂತಪುರದಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿತ್ತು. ಸದ್ಯ ಆರೋಪಿಗಳಿಂದ 80,000 ರೂ. ಬೆಲೆ ಬಾಳುವ 2 ಬೈಕ್ ಗಳು, 2 ಮೊಬೈಲ್ ಫೋನ್ʼಗಳು, 91 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಇನ್ನೂ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಶ್ಲಾಘಿಸಿ, ಸೂಕ್ತ ಬಹುಮಾನ ಘೋಷಿಸಿದ್ದಾರೆ.