ನಟಿ ಶ್ರೀದೇವಿ ಆಸ್ತಿ ವಿವಾದ: ಕೋರ್ಟ್‌ ಮೆಟ್ಟಿಲೇರಿದ ಬೋನಿ ಕಪೂರ್‌

0
Spread the love

ಬಾಲಿವುಡ್‌ ಖ್ಯಾತ ನಟಿ ಶ್ರೀದೇವಿ ನಿಧನರಾಗಿ ಏಳು ವರ್ಷ ಕಳೆದಿದೆ. ಇದೀಗ ನಟಿಯ ಆಸ್ತಿ ವಿವಾದ ಶುರುವಾಗಿದ್ದು ಶ್ರೀದೇವಿ ಪತಿ ಬೋನಿ ಕಪೂರ್‌ ಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ತೆಲುಗು, ತಮಿಳು, ಹಿಂದಿ ಚಿತ್ರರಂಗಗಳಲ್ಲಿ ಹಲವು ದಶಕಗಳ ಕಾಲ ಸ್ಟಾರ್ ನಟಿಯಾಗಿ ಮೆರೆದ ಶ್ರೀದೇವಿ ನೀರಿನ ಟಬ್‌ ನಲ್ಲಿ ಮುಳುಗಿ ಮೃತಪಟ್ಟಿದ್ದರು. ಆರಂಭದಲ್ಲಿ ಬೋನಿ ಕಪೂರ್‌ ಮೇಲೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಆ ಬಳಿಕ ತನಿಖೆ ನಡೆಸಿದ ಪೊಲೀಸರು ಶ್ರೀದೇವಿಯದ್ದು ಆಕಸ್ಮಿಕ ಸಾವು ಎಂದು ರಿಪೋರ್ಟ್‌ ನೀಡಿದರು. 80ರ ದಶಕದ ಅತ್ಯಂತ ಬೇಡಿಕೆಯ ಮತ್ತು ದುಬಾರಿ ನಟಿಯಾಗಿದ್ದರು ಶ್ರೀದೇವಿ ಅಂದು ಖರೀದಿಸಿದ್ದ ಜಮೀನಿನ ವಿವಾದ ಈಗ ಭುಗಿಲೆದ್ದಿದೆ.  ಶ್ರೀದೇವಿಯ ಪತಿ ಬೋನಿ ಕಪೂರ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ.
1988ರಲ್ಲಿ ಶ್ರೀದೇವಿ, ಚೆನ್ನೈನ ಈಸ್ಟ್ ಕೋಸ್ಟ್ ರೋಡ್​​ನಲ್ಲಿ ಆಸ್ತಿಯೊಂದರ ಖರೀದಿ ಮಾಡಿದ್ದರು. ಅದನ್ನು ಫಾರಂ ಹೌಸ್ ರೀತಿ ಶ್ರೀದೇವಿ ಮತ್ತು ಅವರ ಕುಟುಂಬದವರು ಬಳಸುತ್ತಿದ್ದರು. ಆದರೆ 2005 ರಿಂದಲೂ ಆ ಆಸ್ತಿ ಮೇಲೆ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದ್ದು ಇದೀಗ ಅಕ್ರಮವಾಗಿ ಆ ಜಾಗವನ್ನು ಆಕ್ರಮಿಸಲಾಗಿದೆ ಎಂದು ಬೋನಿ ಕಪೂರ್ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಮುದಲಿಯಾರ್ ಎನ್ನುವರಿಗೆ ಸೇರಿದ್ದ ಆ ಜಾಗವನ್ನು ಅವರ ಮಕ್ಕಳು 1960ರಲ್ಲಿಯೇ ಭಾಗ ಮಾಡಿಕೊಂಡಿದ್ದರು. ಆ ಬಳಿಕ ಅವರ ಮಗನೋರ್ವನಿಂದ ಜಾಗವನ್ನು ಶ್ರೀದೇವಿ ಖರೀದಿ ಮಾಡಿದ್ದರು. ಆದರೆ 2005 ರಲ್ಲಿ ಮುದಲಿಯಾರ್ ಅವರ ಎರಡನೇ ಪತ್ನಿಯ ಇಬ್ಬರು ಮಕ್ಕಳು ಮತ್ತು ಮೊದಲನೇ ಪತ್ನಿಯ ಒಬ್ಬ ಮಗಳು ಸೇರಿ ದಾವೆ ಹೂಡಿದ್ದರು. ಇದೀಗ ದಾವೆ ಹೂಡಿದವರಲ್ಲಿ ಕೆಲವರು ಆ ಆಸ್ತಿಯನ್ನು ಅತಿಕ್ರಮಿಸಿದ್ದಾರೆ ಎಂದು ಬೋನಿ ಕಪೂರ್ ಆರೋಪಿಸಿದ್ದಾರೆ.

ಬೋನಿ ಕಪೂರ್ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ತಾಂಬರಂ ತಾಲ್ಲೂಕು ತಹಶೀಲ್ದಾರ್​ಗೆ ಸೂಚನೆ ನೀಡಿದ್ದು, ಸದರಿ ಜಮೀನಿನ ಕುರಿತ ದಾಖಲೆಯನ್ನು ಪರಿಶೀಲಿಸುವ ಬಗ್ಗೆ ಹಾಗೂ ಬೋನಿ ಕಪೂರ್ ಆರೋಪ ಮಾಡಿರುವಂತೆ ನಕಲಿ ಉತ್ತರಾಧಿಕಾರ ಪ್ರಮಾಣಪತ್ರದ ಸತ್ಯಾಸತ್ಯತೆಯ ಬಗ್ಗೆ ನಾಲ್ಕು ವಾರಗಳಲ್ಲಿ ಮಾಹಿತಿ ನೀಡುವಂತೆ ಸೂಚಿಸಿದೆ.


Spread the love

LEAVE A REPLY

Please enter your comment!
Please enter your name here