ಚಿತ್ರದುರ್ಗ:- ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಕಾರು ಸಮೇತ ಲಕ್ಷಾಂತರ ರೂ. ಕದ್ದು ಪಾರಾರಿಯಾಗಿದ್ದ ಚಾಲಾಕಿ ಚಾಲಕ ನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಅರೆಸ್ಟ್ ಮಾಡಿರುವ ಘಟನೆ ಜರುಗಿದೆ.
ನಿವೃತ್ತ ಎಸ್ಪಿ ಗುರುಪ್ರಸಾದ್ ತಮ್ಮ ಪತ್ನಿಯೊಂದಿಗೆ ಬಳ್ಳಾರಿಯಲ್ಲಿ ಜಮೀನು ಮಾರಾಟ ಮಾಡಲು ಬಾಡಿಗೆ ಕಾರಿನಲ್ಲಿ ತೆರಳಿದ್ದರು. ಅಲ್ಲಿ ಸರಿ ಸುಮಾರು 97 ಲಕ್ಷ ರೂ.ಗೆ ಜಮೀನು ಮಾರಾಟ ಮಾಡಿದ್ದು, ಕಾರಲ್ಲಿಯೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಈ ಮಧ್ಯೆ ಚಳ್ಳಕೆರೆಯಲ್ಲಿ ಊಟಕ್ಕೆಂದು ಕಾರು ನಿಲ್ಲಿಸಿ ತೆರಳಿದ್ದರು. ಆಗ ಕಾರು ಚಾಲಕ ಇವರಿಗೆ ಗೊತ್ತಿಲ್ಲದೇ 97 ಲಕ್ಷ ಹಣದೊಂದಿಗೆ ಕಾರು ಸಮೇತ ಪರಾರಿಯಾಗಿದ್ದ.
ಈ ಬಗ್ಗೆ ನಿವೃತ್ತ ಎಸ್ಪಿ ಗುರುಪ್ರಸಾದ್ ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಚ್ಚೆತ್ತ ಪೊಲೀಸರ ತಂಡ ಕಳ್ಳನ ಪತ್ತೆಗೆ ಬಲೆ ಬೀಸಿದ್ದರು. ಆರೋಪಿ ರಮೇಶ್ ಮೂಲತಃ ಆಂಧ್ರದ ಹಿಂದೂಪುರ ಮೂಲದವನಾದ ಹಿನ್ನೆಲೆ ಆಂಧ್ರದತ್ತ ಪ್ರಯಾಣ ಬೆಳೆಸಿ ಸಿನಿಮಾ ಶೈಲಿಯಲ್ಲಿ ಚೇಸ್ ಮಾಡಿದ್ದರು. ಆಂಧ್ರದ ಬಳಿ ರಮೇಶ್ ಕಾರು ಮರಕ್ಕೆ ಡಿಕ್ಕಿಯಾಗಿತ್ತು. ಕೂಡಲೇ ಆರೋಪಿಯನ್ನು ಸೆರೆಹಿಡಿದ ಪೊಲೀಸರು 97 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ.