ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾಡಳಿತ ಭವನದ ಎದುರು ಉತ್ತರ ಕರ್ನಾಟಕ ಮಹಾಸಭಾದಿಂದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ 10 ದಿನಗಳಿಂದ ಜಿಲ್ಲೆಯ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಗುರುವಾರ ಜಿಲ್ಲಾಡಳಿತದ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಧರಣಿ ಸ್ಥಳಕ್ಕೆ ಅಖಿಲ ಕರ್ನಾಟಕ ಮಹಿಳಾ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷೆ ಮಹಾದೇವಿ ಎಮ್.ಹುಯಿಲಗೋಳ ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ, ಕೂಡಲೇ ರೈತರ ಬೇಡಿಕೆಗಳನ್ನು ಜಿಲ್ಲಾಡಳಿತ ಈಡೇರಿಸಬೇಕು ಎಂದು ಆಗ್ರಹಿಸಿದರು.
ವಕೀಲರು ಮತ್ತು ಮಾಹಿತಿ ಹಕ್ಕು ಹೋರಾಟಗಾರರಾದ ಎಂ.ಐ. ಮುಲ್ಲಾ ಮಾತನಾಡುತ್ತಾ, ರೈತರ ಹೋರಾಟ ನೈಜವಾದ ಹೋರಾಟವಾಗಿದೆ. ಮಳೆಯಲ್ಲಿ ರೈತರರು ಬೀದಿಯಲ್ಲಿ ಕುಳಿತು ಹೋರಾಟ ಮಾಡುವ ಸ್ಥಿತಿಯನ್ನು ತಂದಿರುವ ಜಿಲ್ಲಾಡಳಿತದ ನಡೆಯನ್ನು ಖಂಡಿಸುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವರು ಧರಣಿ ನಿರತರನ್ನು ಭೇಟಿಯಾಗಿ ಅವರ ಸಮಸ್ಯೆಯನ್ನು ಆಲಿಸಿ ಸೂಕ್ತ ಪರಿಹಾರಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಬೆಳದಡಿಯ ಕುಬೇರಪ್ಪ ಪವಾರ ಉಪಸ್ಥಿತರಿದ್ದರು. ಪ್ರತಿಭಟನಾ ಸ್ಥಳದಲ್ಲಿ ಎನ್.ಟಿ. ಪೂಜಾರ, ಚಂಬಣ್ಣ ಚನ್ನಪಟ್ಟಣ, ನಾಮದೇವ, ನಿಂಗಪ್ಪ, ಚನ್ನಪ್ಪ ಭಗತ, ಫಿರೋಜ ನದಾಫ್ ಸೇರಿದಂತೆ ರೈತರು, ಮಹಿಳೆಯರು ಇದ್ದರು.
ಸತತ ಮಳೆಯಿಂದ ಧರಣಿಯ ಸ್ಥಳದಲ್ಲಿ ಮಳೆಯ ನೀರು ನಿಂತಿದ್ದು, ಇದರಿಂದ ಧರಣಿ ನಿರತರಿಗೆ ಸೊಳ್ಳೆಗಳಿಂದ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹರಡುವ ಭಯ ರೈತರನ್ನು ಕಾಡುತ್ತಿದೆ. ಗದಗ-ಬೇಟಗೇರಿ ನಗರಸಭೆಯ ಯಾವೊಬ್ಬ ಅಧಿಕಾರಿಯೂ ನೀರು ತುಂಬಿರುವ ಸ್ಥಳದಲ್ಲಿ ಹೋಗದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ನಗರಸಭೆಯ ಅಧಿಕಾರಿಗಳು ಎಚ್ಚೆತ್ತು ರೈತರಿಗೆ ಹರಡಬಹುದಾದ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಧರಣಿ ನಿರತರು ಆಗ್ರಹಿಸಿದ್ದಾರೆ.



