ಅಂತರಂಗದ ಸೌಂದರ್ಯ ಮುಖ್ಯ

0
??????????????
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಹಿಳೆಗೆ ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯ ಬಹಳಷ್ಟು ಮುಖ್ಯ. ಬಾಹ್ಯ ಸೌಂದರ್ಯ ಸರಿಯಿಲ್ಲವೆಂದು ಖಿನ್ನತೆಗೆ ಒಳಗಾಗದೆ, ಅಂತರಂಗದ ಸೌಂದರ್ಯವನ್ನು ಬೆಳೆಸಿಕೊಂಡು ಮುನ್ನಡೆದರೆ ಆಕೆ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆಯುತ್ತಾಳೆ ಎಂದು ಶಿಕ್ಷಕಿ ಪ್ರತಿಭಾ ಗಾಣಿಗೇರ ಹೇಳಿದರು.

Advertisement

ಕೋಡಿಕೊಪ್ಪದ ಶ್ರೀ ಅನ್ನದಾನೇಶ್ವರ ಮಂಟಪದಲ್ಲಿ ಬುಧವಾರ ಸಂಜೆ ನಡೆದ ಶಿವಾನುಭವಗೋಷ್ಠಿ-65ರಲ್ಲಿ ಅವರು `ಸಮಾಜದಲ್ಲಿ ಮಹಿಳೆಯ ಸ್ಥಾನಮಾನ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮಹಿಳೆ ತನಗೆ ನೀಡಿದ ಕಾರ್ಯವನ್ನು ನಿಷ್ಠೆಯಿಂದ ಮಾಡುವುದರಿಂದ ಸಮಾಜದಲ್ಲಿ ಆಕೆಗೆ ವಿಶೇಷ ಸ್ಥಾನವಿದೆ. ಅನುಕೂಲಕರ ಪ್ರೋತ್ಸಾಹ ಸಿಕ್ಕರೆ ಆಕೆ ಏನನ್ನಾದರೂ ಸಾಧಿಸಬಲ್ಲಳು. ಅದಕ್ಕೆ ಪುರುಷರ ಸಹಕಾರವೂ ಬೇಕು. ಭಾರತದ ಮಹಿಳೆಯರಲ್ಲಿ ಸಂಸ್ಕಾರ, ಅತಿಥಿ ಸತ್ಕಾರಗಳು ಹಾಸುಹೊಕ್ಕಾಗಿವೆ. ಆಕೆಗೆ ಎಷ್ಟೇ ಅಡೆತಡೆಗಳಿದ್ದರೂ ಸಾಧಿಸುವ ಛಲವಿರುತ್ತದೆ. ಅನ್ನದಾನೇಶ್ವರ ಶಿಕ್ಷಣ ಸಂಸ್ಥೆ ಅಕ್ಷರದ ಜ್ಞಾನದೊಂದಿಗೆ ಹೊಟ್ಟೆಗೆ ಅನ್ನ ಮತ್ತು ತಲೆಗೆ ಅಕ್ಷರವನ್ನು ನೀಡಿ ಬಹಳಷ್ಟು ಜನರ ಬಾಳಿನಲ್ಲಿ ಬೆಳಕು ಮೂಡಿಸಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಜೀವನದ ಪ್ರತಿ ಕ್ಷಣವೂ ಅಮೂಲ್ಯವಾಗಿದೆ. ಏನೇ ಕನಸು ನನಸಾಗಬೇಕಾದರೂ ಅದಕ್ಕೆ ಸತತ ಪ್ರಯತ್ನ, ಪ್ರಾಮಾಣಿಕ ಪರಿಶ್ರಮ ಬೇಕು. ಇದು ದೊರಕಬೇಕಾದರೆ ಜ್ಞಾನ ಬೇಕು. ಜ್ಞಾನದಿಂದ ಕಾರ್ಯ ಮಾಡುವ ಮನುಷ್ಯ ಎಂದಿಗೂ ಸಶಕ್ತನಾಗಿರುತ್ತಾನೆ. ಸಣ್ಣ ಮನಸ್ಸನ್ನು ಹೊಂದಿದವರು ಜೀವನದಲ್ಲಿ ಎಂದಿಗೂ ಮುಂದೆ ಬರಲು ಸಾಧ್ಯವಿಲ್ಲ. ಆದ್ದರಿಂದ ಎಂದಿಗೂ ಉದಾರ ಮನಸ್ಸನ್ನು ಹೊಂದಿ, ಎಲ್ಲರೊಡನೆ ಹೊಂದಿಕೆಯಿಂದ ಬಾಳುವ ಗುಣವನ್ನು ಬೆಳೆಸಿಕೊಳ್ಳಲೆಂದೇ ಶಿವಾನುಭವ ನಡೆಸಲಾಗುತ್ತಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.

ಆಡಳಿತಾಧಿಕಾರಿ ಎನ್.ಆರ್. ಗೌಡರ, ಮುಖ್ಯ ಶಿಕ್ಷಕ ಸಂಗಯ್ಯ ಪ್ರಭುಸ್ವಾಮಿಮಠ, ಉಪನ್ಯಾಸಕ ಎಫ್.ಎನ್. ಹುಡೇದ, ಪತ್ರಕರ್ತ ಪ್ರಭುಸ್ವಾಮಿ ಅರವಟಗಿಮಠ ಮುಂತಾದವರಿದ್ದರು.

ನಮ್ಮಲ್ಲಿ ಅಂತರಂಗದ ಸೌಂದರ್ಯ ಹೆಚ್ಚಾಗಲು ಇಂತಹ ಶಿವಾನುಭವಗೋಷ್ಠಿಗಳು ಸಹಕಾರಿಯಾಗಿವೆ. ಇಲ್ಲಿ ಬರುವ ಅನುಭಾವಿಗಳ ಅನುಭವದ ಮಾತುಗಳು ನಮ್ಮಲ್ಲಿನ ದೋಷಗಳನ್ನು ಹೊಡೆದೋಡಿಸಿ ಜ್ಞಾನದ ಬೆಳಕನ್ನು ನೀಡಲು ಸಹಾಯಕವಾಗುತ್ತವೆ. ಆದ್ದರಿಂದ ಶಿವಾನುಭವದ ಅನುಭವವನ್ನು ನೀವೆಂದಿಗೂ ತಪ್ಪಿಸಿಕೊಳ್ಳಬಾರದು ಎಂದು ಪ್ರತಿಭಾ ಗಾಣಿಗೇರ ಹೇಳಿದರು.


Spread the love

LEAVE A REPLY

Please enter your comment!
Please enter your name here