ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿದ್ದೇನೆ ಎಂದು ಆರೋಪಿಸಿದ್ದ ದೂರುದಾರ ಚಿನ್ನಯ್ಯ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸುದೀರ್ಘ ಶೋಧ ಕಾರ್ಯ ನಡೆಸಿತ್ತು.
ಇದೀಗ ಮಹೇಶ್ ಶೆಟ್ಟಿ ತಿಮರೋಡಿ ಇಂದು ಬೆಳ್ತಂಗಡಿಗೆ ಎಸ್ ಐಟಿ ವಿಚಾರಣೆಗೆ ಆಗಮಿಸಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲು ಇಂದು ಹಾಜರಾಗಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ನಿಂದಿಸಿದ ಆರೋಪದ ಅಡಿ ಬ್ರಹ್ಮಾವರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಆಗಸ್ಟ್ 21 ರಂದು ಉಜಿರೆಯ ತಿಮರೋಡಿಗೆ ಪೊಲೀಸರು ಆಗಮಿಸಿ ಮಹೇಶ್ ಶೆಟ್ಟಿಯನ್ನು ಬಂಧಿಸಿದ್ದರು. ಬಂಧನದ ವೇಳೆ ತಿಮರೋಡಿ ಸೇರಿದಂತೆ ಹಲವು ಮಂದಿ ಅಡ್ಡಿ ಪಡಿಸಿದ್ದರು. ಹೀಗಾಗಿ ಬೆಳ್ತಂಗಡಿ ಠಾಣೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಅಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗೆ ಹಾಜರಾಗಲು ತಿಮರೋಡಿ ಇಂದು ಬೆಳಗ್ಗೆ ಠಾಣೆಗೆ ಬಂದಿದ್ದಾರೆ.